ಗದಗ: ಶಿಕ್ಷಕರು ಅಂದರೆ ಮಕ್ಕಳಿಗೆ ದೇವರು ಇದ್ದಂತೆ. ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳಬೇಕಾಗಿದ್ದು ಶಿಕ್ಷಕನ ಧರ್ಮ. ವಿದ್ಯಾರ್ಥಿ ಏನಾದರೂ ಎಡವಟ್ಟು ಮಾಡಿದಾಗ ಅವನಿಗೆ ಸರಿಯಾಗಿ ಅರ್ಥ ಆಗೋವಂತೆ ತಿಳಿ ಹೇಳಬೇಕಾಗಿದ್ದು ಆತನ ಕರ್ಮ. ಆದರಲ್ಲೂ ಮಕ್ಕಳಿಗೆ ಯಾವುದೇ ರೀತಿಯಲ್ಲಿ ದೈಹಿಕವಾಗಿ ಶಿಕ್ಷೆ ನೀಡುವಂತಿಲ್ಲ ಎಂದು ಸರ್ಕಾರವೇ ನಿಯಮ ಮಾಡಿದೆ. ಆದರೆ ಇಲ್ಲೊಬ್ಬ ಶಿಕ್ಷಕ ಇದೆಲ್ಲಾ ಬಿಟ್ಟು ವಿದ್ಯಾರ್ಥಿಯೊಬ್ಬನಿಗೆ ಹಿಗ್ಗಾಮುಗ್ಗ ಥಳಿಸಿ ಪೋಷಕರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.
ಶಿಕ್ಷಕನಿಗೆ ಪೋಷಕರ ತರಾಟೆ:
ಘಟನೆಯಿಂದ ರೊಚ್ಚಿಗೆದ್ದ ಪೋಷಕರು ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬೇಕಂತಲೇ ನನ್ನ ಮಗನಿಗೆ ನೀವು ಪದೇ ಪದೆ ಹೊಡಿಯುತ್ತಿದ್ದೀರಿ, ನನ್ನ ಮಗನಿಗೆ ಹಿಂದೆಯೂ ಮೂರ್ನಾಲ್ಕು ಬಾರಿ ಈ ರೀತಿ ಹಲ್ಲೆ ಮಾಡಿದ್ದೀರಿ. ಯಾವ ಕಾರಣಕ್ಕೆ ನನ್ನ ಮಗನ ಮೇಲೆ ದ್ವೇಷ ಅಂತ ಶಿಕ್ಷಕನಿಗೆ ಶಾಲೆಯಲ್ಲಿಯೇ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಅಂದಹಾಗೆ ವಿದ್ಯಾರ್ಥಿ ಮೌನೇಶ್ ಇಂದು ಶಿಕ್ಷಕರು ಹೇಳಿದ ಹೋಂ ವರ್ಕ್ ಮಾಡಿಕೊಂಡು ಬಂದಿರಲಿಲ್ಲ. ಇವತ್ತು ಎಲ್ಲಾ ವಿದ್ಯಾರ್ಥಿಗಳ ಹೋಂ ವರ್ಕ್ ಚೆಕ್ ಮಾಡುವಾಗ ಎಲ್ಲರಂತೆ ಇವನನ್ನೂ ಪ್ರಶ್ನೆ ಮಾಡಿದ್ದಾರೆ. ಆದರೆ ಮೌನೇಶ್ ಶಿಕ್ಷಕರಿಗೆ ಉಡಾಪೆ ಉತ್ತರ ನೀಡಿದ್ದಾನೆ. ಉಳಿದ ಎಲ್ಲರನ್ನೂ ಮೊದಲು ಚೆಕ್ ಮಾಡಿ ನಾ ಆ ಮೇಲೆ ತೋರಿಸ್ತಿನಿ ಅಂತ ಹೇಳಿದ್ದಾನೆ. ಇದರಿಂದ ಸಿಟ್ಟಿಗೆದ್ದ ಶಿಕ್ಷಕ ಕಡಗದ ವಿದ್ಯಾರ್ಥಿಗೆ ಮೊದಲು ಕಪಾಳಕ್ಕೆ ಬಾರಿಸಿದ್ದಾರೆ. ಬಳಿಕ ಕೋಲಿನಿಂದ ಸಿಟ್ಟು ಇಳಿಯೋವರೆಗೂ ಬಾಸುಂಡೆ ಬರುವಂತೆ ಥಳಿಸಿದ್ದಾರೆ. ಸದ್ಯ ಸ್ಥಳಕ್ಕೆ ಗಜೇಂದ್ರಗಡ ಬಿಇಓ, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಮೊದಲೇ ಕೊರೊನಾ ಕಾಲದಲ್ಲಿ ಶಾಲೆ ಆರಂಭಿಸಲಾಗಿದೆ. ಇನ್ನೂ ಪೋಷಕರಲ್ಲಿ ಕೋವಿಡ್ ಆತಂಕ ದೂರವಾಗಿಲ್ಲ. ಕೊರೊನಾ ಭಯದಲ್ಲಿಯೂ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ಆದರೆ ಇಂತಹ ಸಂಕಷ್ಟದ ಸಂದರ್ಭದಲ್ಲಿ ಶಿಕ್ಷಕರೊಬ್ಬರು ಈ ರೀತಿ ವರ್ತಿಸಿರುವುದು ನಿಜಕ್ಕೂ ಅಮಾನವೀಯ.