ದೊಡ್ಡಬಳ್ಳಾಪುರ: ತಂಗಿಯ ಲವರ್ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಅಕ್ಕ ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಲೆಗೈದ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಜಕ್ಕಸಂದ್ರ ಗ್ರಾಮದಲ್ಲಿ ಮಾರ್ಚ್ 23ರಂದು ನಡೆದಿದೆ.
ಹನುಮಯ್ಯ (35) ಕೊಲೆಯಾದ ವ್ಯಕ್ತಿ. ಹೆಂಡತಿ ಎ.ವಿ. ಭಾಗ್ಯ, ತಂಗಿ ಪ್ರಿಯಕರ ನಾಗೇಶ್ ಜೊತೆ ಸೇರಿ ಗಂಡ ಹನುಮಯ್ಯನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿದ್ದಾರೆ. ಗಂಡನ ಕೊಲೆ ಮಾಡಿದ ಹೆಂಡತಿ ಇಡೀ ದಿನ ಶವದ ಜೊತೆ ಇದ್ದಳು, ಮರುದಿನ ಬೆಳಗ್ಗೆ ಪಕ್ಕದ ಮನೆಯ ಹುಡುಗಿ ಸ್ನಾನಕ್ಕೆ ಎಂದು ಬಂದಾಗಲೇ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು.
ಅನೈತಿಕ ಸಂಬಂಧದ ಕುರಿತು ಗಂಡನಿಗೆ ವಿಚಾರ ತಿಳಿದಾಗ ಗಂಡ ಹೆಂಡತಿಯ ಮಧ್ಯೆ ಜಗಳ ನಡೆದಿತ್ತು. ಸಂಬಂಧಿಕರು ರಾಜಿ ಪಂಚಾಯಿತಿ ಮಾಡಿ ಗಂಡ ಹೆಂಡತಿಯನ್ನು ಒಂದು ಮಾಡಿದ್ದರು. ಆದರೆ, ಆ ರಾತ್ರಿ ಭಾಗ್ಯ ಪ್ರಿಯಕರನನ್ನು ಮನೆಗೆ ಬರಲು ಹೇಳಿ ಮಧ್ಯರಾತ್ರಿ ಗಂಡನ ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದಾಳೆ.
ಕೊಲೆಯಾದ ಹನುಮಯ್ಯ 14 ವರ್ಷದ ಹಿಂದೆ ಹೊಸಕೋಟೆ ತಾಲೂಕು ಅಟ್ಟೂರಿನ ಭಾಗ್ಯಾಳನ್ನು ಮದುವೆಯಾಗಿದ್ದನು. ಇವರ ದಾಂಪತ್ಯಕ್ಕೆ ಒಂದು ಗಂಡು , ಒಂದು ಹೆಣ್ಣು ಮಗು ಇದೆ. ಮಕ್ಕಳಿಬ್ಬರು ಹಾಸ್ಟೇಲ್ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಗಂಡ ಹೆಂಡತಿ ಮಾತ್ರ ಮನೆಯಲ್ಲಿ ವಾಸವಾಗಿದ್ದರು.
ಸಣ್ಣಪುಟ್ಟ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಹನುಮಯ್ಯ ಹೆಂಡತಿಯನ್ನು ಚೆನ್ನಾಗಿಯೇ ನೋಡಿಕೊಂಡಿದ್ದ, ಆದರೆ ಆತನ ಕುಡಿತ ಗಂಡ ಹೆಂಡತಿ ಜಗಳಕ್ಕೂ ಕಾರಣವಾಗಿತ್ತು. ಈ ಜಗಳದಿಂದಾಗಿ ಭಾಗ್ಯ ತಂಗಿಯ ಪ್ರಿಯಕರನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು.
ಇದನ್ನೂ ಒದಿ: ಕುಡಿದು ವಾಹನ ಚಲಾಯಿಸಿ ಅಪಘಾತ: ಇಬ್ಬರು ಪೊಲೀಸರ ಅಮಾನತು
ನಾಗೇಶ್ ಜೊತೆ ಚಕ್ಕಂದವಾಡಲು ಭಾಗ್ಯಾ ಗಂಡನ ಮನೆ ಬಿಟ್ಟು ತವರಿಗೆ ಬರುತ್ತಿದ್ಧಳು. ಪರಪುರುಷನ ಸಾಂಗತ್ಯ ಬಯಸಿದ್ದ ಹೆಂಡತಿ ಮೇಲೆ ಜಗಳವಾಡುತ್ತಿದ್ದ ಗಂಡನನ್ನು ಕೊಲೆ ಮಾಡಲು ಪ್ರಿಯಕರನ ಸಹಾಯ ಪಡಿದಿದ್ದಳು. ಹನುಮಯ್ಯನನ್ನು ಕೊಲೆ ಮಾಡಲು ಪ್ರಿಯಕರ ನಾಗೇಶ್ ಜೊತೆ ಆತನ ಸ್ನೇಹಿತ ನಾರಾಯಣಸ್ವಾಮಿ ಕೂಡಾ ಕೈ ಜೋಡಿಸಿದ್ದನು.
ಮೂವರು ಸೇರಿ ಹನುಮಯ್ಯನ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆ. ನಂತರ ಭಾಗ್ಯಾ ಒಬ್ಬಳನ್ನು ಮನೆಯಲ್ಲಿ ಬಿಟ್ಟು ನಾಗೇಶ್ ಮತ್ತು ನಾರಾಯಣಸ್ವಾಮಿ ಪರಾರಿಯಾಗಿದ್ದರು. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಯಾದ ಮೂರೇ ದಿನಕ್ಕೆ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.