ಹುಬ್ಬಳ್ಳಿ: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಬಲಿಯಾಗಿರುವ ಘಟನೆ ಹುಬ್ಬಳ್ಳಿಯ ನಡೆದಿದ್ದು, ಕಿಮ್ಸ್ ವೈದ್ಯರ ವಾಟ್ಸ್ಆ್ಯಪ್ ಸಂದೇಶದ ಮೂಲಕ ಈ ಸತ್ಯ ಬಯಲಾಗಿದೆ. ಸೂಕ್ತ ಚಿಕಿತ್ಸೆ ಸಿಗದೇ 62 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಕಿಮ್ಸ್ನ ವೇದಾಂತ ಕೋವಿಡ್ ಸೆಂಟರ್‌ನ ಐಸಿಯು ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಗೆ ಔಷಧಗಳನ್ನು ನೀಡಲು ಯಾವುದೇ ನರ್ಸಿಂಗ್ ಸಿಬ್ಬಂದಿ ಇರಲಿಲ್ಲ ಎಂದು ಹೇಳಲಾಗಿದೆ.
ಈ ವಿಷಯವನ್ನು ವೇದಾಂತ ಐಸಿಯುನ ಶುಶ್ರೂಷಕ ಶ್ರೀನಿವಾಸ್ ಅವರಿಗೆ ತಿಳಿಸಲಾಗಿದೆ. ಆದರೆ ಅವರು ಈ ಬಗ್ಗೆ ಜವಾಬ್ದಾರಿ ತೆಗೆದುಕೊಂಡಿಲ್ಲ. ಅಷ್ಟೇ ಅಲ್ಲ ಇಲ್ಲಿ ಯಾವುದೇ ನರ್ಸಿಂಗ್ ಸಿಬ್ಬಂದಿಯನ್ನು ಇಲ್ಲಿ ನಿಯೋಜಿಸಿರಲಿಲ್ಲ ಎನ್ನಲಾಗಿದೆ. ಮತ್ತೊಂದು ಕಡೆ ಇಂತಹ ವಾತಾವರಣದಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟ. ದಯವಿಟ್ಟು ಈ ವಿಷಯದ ಗಮನ ಹರಿಸಿ ಎಂದು ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪಗೆ ವಾಟ್ಸ್ಆ್ಯಪ್ ಗ್ರೂಪ್‌ನಲ್ಲಿ ಐಯುಸಿ ಸಿಬ್ಬಂದಿ ಸಂದೇಶ ಕಳುಹಿಸಿದ್ದಾರೆ. ಈ ಸಂದೇಶವೀಗ ಬಯಲಾಗಿದೆ ಎಂದು ಹೇಳಲಾಗುತ್ತಿದೆ.
ವಾಟ್ಸ್ಆ್ಯಪ್ ಗ್ರೂಪ್‌ನಲ್ಲಿ ಹರಿದಾಡುತ್ತಿರುವ ಸಂದೇಶವನ್ನು ನೋಡಿದರೆ, ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳ ಜೀವಕ್ಕೆ ಬೆಲೆಯೇ ಇಲ್ವಾ ಎಂಬ ಪ್ರಶ್ನೆ ಹುಟ್ಟುವಂತೆ ಮಾಡಿದೆ.
ಮಧ್ಯಾಹ್ನ 2 ರಿಂದ 2:45ರ ಸಮಯದಲ್ಲಿ ಆಸ್ಪತ್ರೆಯ ಐಸಿಯುನಲ್ಲಿ ಯಾವುದೇ ಸಿಬ್ಬಂದಿ ಇರಲಿಲ್ಲ ಎಂಬುದು ಈ ಸಂದೇಶದಿಂದ ಸ್ಪಷ್ಟವಾಗಿದೆ. ಕಿಮ್ಸ್ ಐಸಿಯು ಪರಿಸ್ಥಿತಿಯೇ ಈ ರೀತಿ ಆದ್ರೆ ರೋಗಿಗಳ ಪಾಡು ಏನು ಎಂಬ ಪ್ರಶ್ನೆ ಈ ಭಾಗದ ಜನರದ್ದಾಗಿದೆ.