ನವದೆಹಲಿ: 20 ಕೋಟಿ ರೂಪಾಯಿ ಸಾಲ ಪಡೆದು ವಂಚನೆ ಪ್ರಕರಣದಲ್ಲಿ ದಂಪತಿಯನ್ನು ಆರ್ಥಿಕ ಅಪರಾಧಗಳ ವಿಭಾಗದ ಅಧಿಕಾರಿಗಳು ಬಂಧಿಸಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ಆರೋಪಿಗಳನ್ನು ಮನದೀಪ್ ಸಿಂಗ್ ಹಾಗೂ ತರ್ವಿಂದರ್ ಕೌರ್ ಎಂದು ಗುರುತಿಸಲಾಗಿದೆ. ತಮ್ಮ ಕಂಪನಿಯ ಹೆಸರಿನಲ್ಲಿ ಎನ್‌ಬಿಎಫ್‌ಸಿಯಿಂದ 20 ಕೋಟಿ ಸಾಲ ಪಡೆದು ಇದಕ್ಕಾಗಿ ಗುರುಗ್ರಾಮ್‌ನಲ್ಲಿ ತಮ್ಮ ಭೂಮಿಯನ್ನು ಅಡಮಾನವಿಟ್ಟಿದ್ದಾರೆ. ಆದರೆ, ನಂತರ ಮನ್‌ದೀಪ್ ಸಿಂಗ್ ಈ ಆಸ್ತಿಯನ್ನು ತನ್ನ ಹೆಂಡತಿಯ ಹೆಸರಿಗೆ ರಹಸ್ಯವಾಗಿ ವರ್ಗಾಯಿಸಿದ್ದಾನೆ. ಈ ವಂಚನೆಯಲ್ಲಿ ಭಾಗಿಯಾಗಿರುವ ಇನ್ನೂ ಕೆಲವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಘಟನೆ ಬಗ್ಗೆ ಮಾಹಿತಿ ನೀಡಿದ ಆರ್ಥಿಕ ಅಪರಾಧಗಳ ವಿಭಾಗದ ಜಂಟಿ ಆಯುಕ್ತೆ ಛಾಯಾ ಶರ್ಮಾ, ಖಾಸಗಿ ಕಂಪನಿಯ ಪ್ರತಿನಿಧಿ ಸಮರೇಶ್ ಅಗರ್ವಾಲ್ ಅವರು 20 ಕೋಟಿ ರೂಪಾಯಿ ವಂಚನೆ ಬಗ್ಗೆ ದೂರು ನೀಡಿದ್ದಾರೆ. ಜೈ ಪಾಲಿಕೆಮ್ ಮತ್ತು ಜೈಟೆಲಿ ಮೊಬೈಲ್ ಪ್ರೈವೇಟ್ ಲಿಮಿಟೆಡ್ ಕಂಪನಿಯಿಂದ ಈ ವಂಚನೆ ನಡೆದಿದೆ ಎಂದು ಅವರು ಹೇಳಿದ್ದಾರೆ.
ಅಡವಿಟ್ಟ ಜಮೀನನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದೇ ಮುಳುವಾಯ್ತಾ?
ಈ ಕಂಪನಿಯ ನಿರ್ದೇಶಕರಾದ ಸತೀಂದರ್ ಪಾಲ್ ಸಿಂಗ್ ಮತ್ತು ಸಂದೀಪ್ ಸಿಂಗ್ ಕೂಡ ಗ್ಯಾರಂಟಿ ನೀಡಿದ್ದರು. ಸಾಲಕ್ಕಾಗಿ ಗುರುಗ್ರಾಮದಲ್ಲಿ ಆಸ್ತಿಯನ್ನೂ ಅಡಮಾನ ಇಟ್ಟಿದ್ದರು.
ಆದರೆ ಸಾಲವನ್ನು ತೆಗೆದುಕೊಂಡ ನಂತರ ಸಾಲದ ಕಂತುಗಳನ್ನು ಕಟ್ಟಲಿಲ್ಲ. 2015ರ ಜುಲೈನಲ್ಲಿ ಆರೋಪಿಗಳ ಪರ ತೀರ್ಪು ಬಂದಿತು. ಆರೋಪಿಗಳು ಈ ಜಮೀನನ್ನು ಮನದೀಪ್ ಸಿಂಗ್ ಅವರ ಪತ್ನಿ ತರ್ವಿಂದರ್ ಕೌರ್ ಹೆಸರಿಗೆ ವರ್ಗಾಯಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ದೂರಿನ ಮೇಲೆ 2020 ರಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಈ ಎರಡೂ ಕಂಪನಿಗಳು ಲಜಪತ್ ನಗರದ ವಿಳಾಸದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಎರಡೂ ಕಂಪನಿಗಳ ಸಂಸ್ಥಾಪಕರು ಹಾಗೂ ನಿರ್ದೇಶಕರು ಒಂದೇ ಆಗಿದ್ದರು. ಕಂಪನಿಯೊಂದಿಗಿನ ಒಪ್ಪಂದದ ಪ್ರತಿಯನ್ನು ಆರ್ಥಿಕ ಅಪರಾಧಗಳ ವಿಭಾಗವು ತೆಗೆದುಕೊಂಡಿದ್ದು, ತರ್ವಿಂದರ್ ಕೌರ್ ಹೆಸರಿನಲ್ಲಿ ಸೇಲ್ ಡೀಡ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಇದಕ್ಕಾಗಿ 5.97 ಕೋಟಿ ಚೆಕ್ ನೀಡಿದ್ದರೂ ಬಳಕೆಯಾಗಲಿಲ್ಲ. ಅಡಮಾನವಿಟ್ಟ ಆಸ್ತಿಯನ್ನು ಆರೋಪಿಗಳು ತರ್ವಿಂದರ್ ಕೌರ್ ಹೆಸರಿಗೆ ವರ್ಗಾಯಿಸಿದ್ದಾರೆ. ಅವರು ಈ ಆಸ್ತಿಯನ್ನು ಬೇರೆಯವರ ಹೆಸರಿಗೆ ವರ್ಗಾಯಿಸಿದ್ದಾರೆ, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: IT Raid: SP ನಾಯಕನ ಮನೆಯಲ್ಲಿ 150 ಕೋಟಿ ಅಕ್ರಮ ಹಣ ಪತ್ತೆ: ಎಣಿಸಿ ಎಣಿಸಿ ಸುಸ್ತಾದ ಅಧಿಕಾರಿಗಳು..!