ಮೈಸೂರು: ಕೌಟುಂಬಿಕ ಕಲಹದಿಂದ ಮನನೊಂದು ತನ್ನ ವಾಟ್ಸಪ್ ಡಿಪಿಯಲ್ಲಿ ಡೆತ್ ನೋಟ್ ಪತ್ರವನ್ನು ಪೋಸ್ಟ್ ಮಾಡಿ ಅಬಕಾರಿ ಇಲಾಖೆ ಕಾನ್ಸ್‌ಟೇಬಲ್ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲೂಕಿನ ಗೊದ್ದನಪುರದಹುಂಡಿಯಲ್ಲಿ ನಡೆದಿದೆ. 24 ವರ್ಷದ ಮಹೇಶ್ ಮೃತ ಕಾನ್ಸ್‌ಟೇಬಲ್.
ಅಬಕಾರಿ ಇಲಾಖೆಯಿಂದ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಯುಬಿ ಎಕ್ಸ್‌ಪೋರ್ಟ್ ಕಾರ್ಖಾನೆಯ ಮೇಲ್ವಿಚಾರಣೆಗೆ ಮಹೇಶ್‌ರನ್ನು ನೇಮಿಸಿದ್ದು, ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಹೇಶ್ ಕಳೆದ ಕೆಲವು ದಿನಗಳಿಂದ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮನನೊಂದಿದ್ದರು ಎನ್ನಲಾಗ್ತಿದೆ. ನಿನ್ನೆ ರಾತ್ರಿ ತನ್ನ ವಾಟ್ಸಪ್ ಡಿಪಿಯಲ್ಲಿ ಡೆತ್ ನೋಟ್ ಅಪ್‌ಲೋಡ್ ಮಾಡಿ ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ. ನಾಲೆ ದಡದ ಮೇಲೆ ಮೊಬೈಲ್ ಇಟ್ಟು ನಂತರ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದು ಬೆಳಗಿನಜಾವ ನಾಲೆಯಲ್ಲಿ ಶವ ಪತ್ತೆಯಾಗಿದೆ. ಈ ಸಂಬಂಧ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
'ನನ್ನ ಸಾವಿಗೆ ಹೆಂಡತಿ, ಮದುವೆ ಬ್ರೋಕರ್ ಸಿದ್ದಪ್ಪ ಕಾರಣ'
ನಾಲೆಗೆ ಹಾರುವ ಮುನ್ನ ಸಾವಿಗೆ ಹೆಂಡತಿ ಲಕ್ಷ್ಮಿ, ಅವರ ತಾಯಿ ಭಾರತಿ, ದೇವರಾಜು, ಹೆಂಡತಿಯ ಚಿಕ್ಕಪ್ಪ ಮಲ್ಲೇಶ್, ಆತನ ಹೆಂಡತಿ ರೇಖಾ, ನನಗೆ ಹುಡುಗಿ ತೋರಿಸಿದ ಬ್ರೋಕರ್ ಸಿದ್ದಪ್ಪ, ಹಾಗೂ ಆತನ ಇಬ್ಬರು ಮಕ್ಕಳು ಕಾರಣರಾಗಿದ್ದಾರೆ ಎಂದು ಡೆತ್ ನೋಟ್‌ನಲ್ಲಿ ಬರೆದಿದ್ದಾರೆ. ಜೊತೆಗೆ ನನ್ನ ಸಾವನ್ನು ತಡೆದುಕೊಳ್ಳುವ ಶಕ್ತಿಯನ್ನು ಅಪ್ಪ-ಅಮ್ಮನಿಗೆ ಭಗವಂತ ನೀಡಲಿ. ನನ್ನ ತಮ್ಮನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಎಲ್ಲಾ ಜವಾಬ್ದಾರಿಯನ್ನು ತಮ್ಮನಿಗೆ ವಹಿಸಿ ಹೋಗುತ್ತಿದ್ದೇನೆ. ಎಲ್ಲರೂ ಕ್ಷಮಿಸಿ ಎಂದು ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.