ಹೈದರಾಬಾದ್: ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಶುಕ್ರವಾರ 'ಅಗ್ನಿಪಥ್' ಯೋಜನೆಯ ವಿರುದ್ಧ ಸೇವಾ ಆಕಾಂಕ್ಷಿಗಳು ತೀವ್ರ ಪ್ರತಿಭಟನೆ ನಡೆಸಿದ್ದರು. ರೈಲಿಗೆ ಬೆಂಕಿ ಹಚ್ಚುವ ಮೂಲಕ ಕೇಂದ್ರದ ಯೋಜನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಗುಂಡಿನದಾಳಿ ನಡೆಸಿದ ಸಂದರ್ಭದಲ್ಲಿ ರಾಕೇಶ್ ಎಂಬ ಯುವಕ ಮೃತಪಟ್ಟಿದ್ದ. ಈ ಸಾವು ಖಂಡಿಸಿ ಪ್ರತಿಪಕ್ಷಗಳು ಕೆಸಿಆರ್ ಸರ್ಕಾರದ ವಿರುದ್ಧ ಮುಗಿಬಿದ್ದಿವೆ.
ಟಿಆರ್‌ಎಸ್ ಸರ್ಕಾರದ ನಡೆ ಖಂಡಿಸಿರುವ ತೆಲಂಗಾಣ ಕಾಂಗ್ರೆಸ್ ಮುಖಂಡ ರೇವಂತ್ ರೆಡ್ಡಿ, ಸಿಕಂದರಾಬಾದ್ನಲ್ಲಿ ಯುವಕನ ಸಾವಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೇ ಹೊಣೆ ಎಂದು ಆರೋಪಿಸಿದ್ದಾರೆ. ಇದು ಟಿಆರ್‌ಎಸ್ ಮತ್ತು ಬಿಜೆಪಿ ಎರಡೂ ಸೇರಿ ಮಾಡಿರುವ ಕೊಲೆ, ಸಾವಿಗೆ ನ್ಯಾಯಕೊಡಬೇಕು, ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಸೇವೆ ನೀಡಬೇಕು ಎಂದು ರೆಡ್ಡಿ ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ.
ಬಿಜೆಪಿಯಿಂದಲೂ ಕೆಸಿಆರ್ ವಿರುದ್ಧ ಆಕ್ರೋಶ: ನಿನ್ನೆ ಹಿಂಸಾಚಾರದ ಬಗ್ಗೆ ಮಾತನಾಡಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ಸಂಜಯ್ ಕುಮಾರ್ ಗುಂಡಿನ ದಾಳಿಯು ಪೂರ್ವ ಯೋಜಿತ ಕೃತ್ಯ, ಅಭರ್ಥಿಗಳು ಪ್ರತಿಭಟನೆಯನ್ನು ಶಾಂತಿಯುತವಾಗಿ ನಡೆಸಲು ಬಯಸಿದ್ದರು, ಆದರೇ ಪ್ರತ್ಯೇಕವಾದಿಗಳು ಪ್ರತಿಭಟನೆಯನ್ನು ಹಿಂಸಾಚಾರಕ್ಕೆ ಕೊಂಡೊಯ್ದಿದ್ದಾರೆ. ಆಡಳಿತ ಪಕ್ಷ ಇದನ್ನು ತಡೆಯಲು ಸಂಪೂರ್ಣ ವಿಫಲವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ತೆಲಂಗಾಣ ಐಟಿ ಮತ್ತು ಕೈಗಾರಿಕಾ ಸಚಿವ ಕೆಟಿ ರಾಮರಾವ್ ಮಾತನಾಡಿ, ಯುವಕನ ಸಾವಿಗೆ ಖಂಡನೆ ವ್ಯಕ್ತಪಡಿಸಿದ್ದರು, ಕೇಂದ್ರ ಸರ್ಕಾರ ತನ್ನ ಯೋಜನೆಯನ್ನು ಪುನರ್ ವಿಮರ್ಶೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಎಲ್ಲೆಡೆ ಬಿಗಿ ಭದ್ರತೆ: ಅಗ್ನಿಪಥ್ ಯೋಜನೆ ಖಂಡಿಸಿ ದೇಶಾದ್ಯಂತ ಪ್ರತಿಭಟನೆಗಳು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಎಲ್ಲ ರೈಲು ನಿಲ್ದಾಣಗಳಿಗೆ ಭದ್ರತೆ ಒದಗಿಸಲಾಗಿದೆ.
ಇದನ್ನೂ ಓದಿ: ಇಂದು ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ: ಹೀಗೆ ವೀಕ್ಷಿಸಿ..