ಕೋಲ್ಕತ್ತಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗ (ಎಸ್ಎಸ್ಸಿ)ದ ನೇಮಕಾತಿ ಹಗರಣದಲ್ಲಿ ಬಂಧನಕ್ಕೊಳಾಗಿರುವ ಮಾಜಿ ಶಿಕ್ಷಣ ಸಚಿವ ಮತ್ತು ಹಾಲಿ ಕೈಗಾರಿಕಾ ಸಚಿವ ಪಾರ್ಥ ಚಟರ್ಜಿ ಅವರ ಅರೆಸ್ಟ್ ಮೆಮೋದಲ್ಲಿ ಜಾರಿ ನಿರ್ದೇಶನಾಲಯವು (ಇಡಿ) ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಹೆಸರು ಮತ್ತು ಫೋನ್ ಸಂಖ್ಯೆಯನ್ನು ದಾಖಲಿಸಿದೆ ಎನ್ನಲಾಗ್ತಿದೆ.
ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಹಗರಣದಲ್ಲಿ ಇಡಿ ಅಧಿಕಾರಿಗಳು ಸುದೀರ್ಘ 27 ಗಂಟೆಗಳ ವಿಚಾರಣೆಯ ನಂತರ ಸಚಿವ ಪಾರ್ಥ ಚಟರ್ಜಿ ಅವರನ್ನು ಶನಿವಾರ ಬೆಳಗ್ಗೆ ಬಂಧಿಸಿದ್ದರು. ವಿಚಾರಣೆ ವೇಳೆ ಸಿಎಂ ಮಮತಾ ಬ್ಯಾನರ್ಜಿ ಅವರು ತಮ್ಮ ಏಕೈಕ ವಿಶ್ವಾಸಾರ್ಹ ವ್ಯಕ್ತಿಯಾಗಿದ್ದು, ಅವರನ್ನು ಭೇಟಿ ಮಾಡಲು ಅಥವಾ ಕರೆ ಮಾಡಲು ಬಯಸಿದ್ದೇನೆಂದು ಪಾರ್ಥ ಚಟರ್ಜಿ ಹೇಳಿದ್ದರು. ಆದರೆ, ನನ್ನ ಬಗ್ಗೆ ಯಾವುದೇ ವಿವರ ಪಡೆಯಲು ಸಿಎಂ ಅವರನ್ನು ಮಾತ್ರ ಸಂಪರ್ಕಿಸಬಹುದು ಎಂದಿದ್ದರು ಎಂದು ತಿಳಿದು ಬಂದಿದೆ.
ಚಟರ್ಜಿಯವರ ಹೇಳಿಕೆಯನ್ನು ಅನುಸರಿಸಿಯೇ ಕೇಂದ್ರೀಯ ಸಂಸ್ಥೆಯಾದ ಇಡಿ ಅಧಿಕಾರಿಗಳು, ಬಂಧನ ಮೆಮೊದಲ್ಲಿ ಮಮತಾ ಬ್ಯಾನರ್ಜಿ ಅವರ ಹೆಸರು ಮತ್ತು ಫೋನ್ ಸಂಖ್ಯೆಯನ್ನು ದಾಖಲಿಸಿದ್ದಾರೆ. ಇತ್ತ, ಸುದ್ದಿ ಹರಡಿದ ತಕ್ಷಣವೇ ತೃಣಮೂಲ ಕಾಂಗ್ರೆಸ್ನ ಉನ್ನತ ನಾಯಕರು ಚಟರ್ಜಿ ವಿರುದ್ಧ ಸಿಟ್ಟಾಗಿದ್ದಾರೆ ಎಂದೂ ತಿಳಿದುಬಂದಿದೆ.
ಈ ಬಗ್ಗೆ ಕೋಲ್ಕತ್ತಾ ಮೇಯರ್ ಫಿರ್ಹಾದ್ ಹಕೀಮ್ ಪ್ರತಿಕ್ರಿಯಿಸಿದ್ದು, ಇದು ಸಂಪೂರ್ಣವಾಗಿ ಆಧಾರರಹಿತವೆಂದು ತಳ್ಳಿಹಾಕಿದ್ದಾರೆ. ಕೇಂದ್ರೀಯ ಸಂಸ್ಥೆಯ ಅಧಿಕಾರಿಗಳು ಯಾರದ್ದೇ ಮನೆಗೆ ಶೋಧ ಕಾರ್ಯಾಚರಣೆಗಾಗಿ ಬಂದಾಗ ಅಥವಾ ವಿಚಾರಣೆಗೆ ಒಳಪಡಿಸಿದಾಗ ಸಂಬಂಧಪಟ್ಟ ವ್ಯಕ್ತಿ ಮತ್ತು ಅವರ ಕುಟುಂಬ ಸದಸ್ಯರ ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗುತ್ತದೆ. ಹೀಗಾಗಿ ಚಟರ್ಜಿಯವರ ಪ್ರಕರಣವೂ ಇದಕ್ಕೆ ಹೊರತಾಗಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಗಳ ವಿರುದ್ಧ ಆರೋಪ.. ಕಾಂಗ್ರೆಸ್ಗೆ ಸಚಿವೆ ಸ್ಮೃತಿ ಇರಾನಿ ಲೀಗಲ್ ನೋಟಿಸ್