ಸಮಸ್ತಿಪುರ (ಬಿಹಾರ): ಬಿಹಾರದ ಸಮಸ್ತಿಪುರದಲ್ಲಿ ಧಾರ್ಮಿಕ ಸಭೆಗೆ ತೆರಳುತ್ತಿದ್ದ ಜನರ ಗುಂಪಿನ ಮೇಲೆ ಕಾರೊಂದು ನುಗ್ಗಿದ ಪರಿಣಾಮ 15 ಜನ ಗಾಯಗೊಂಡಿದ್ದು, ಅವರಲ್ಲಿ ಒಂಬತ್ತು ಜನರ ಸ್ಥಿತಿ ಗಂಭೀರವಾಗಿದೆ. ಸೋಮವಾರ ಈ ದುರ್ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಸಮಸ್ತಿಪುರ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದ್ದರಿಂದ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಡಿಎಂಸಿಎಚ್‌ಗೆ ಕಳುಹಿಸಲಾಗಿದೆ.
ಪೊಲೀಸರ ಪ್ರಕಾರ, ಮುಫಾಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ಜಿತ್ವಾರ್‌ಪುರದಲ್ಲಿರುವ ಕನ್ಹಯ್ಯಾ ಚೌಕ್ ಬಳಿ ಈ ಘಟನೆ ನಡೆದಿದೆ. ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳಲು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಜನ ಸೇರಿದ್ದರು. ಹಠಾತ್ತನೆ ನಿಯಂತ್ರಣ ತಪ್ಪಿದ ಕಾರು ಜನರ ಮೇಲೆ ನುಗ್ಗಿದ ಪರಿಣಾಮ ದುರಂತ ಸಂಭವಿಸಿದೆ. ಅಪಘಾತದ ನಂತರ ಸ್ಥಳದಲ್ಲಿ ನೂಕುನುಗ್ಗಲಿನ ಪರಿಸ್ಥಿತಿ ನಿರ್ಮಾಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಜನರಿಂದ ಮಾಹಿತಿ ಪಡೆದ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿದೆ. ಕಾರು ಚಾಲಕ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದ್ದು, ಪೊಲೀಸರು ವಾಹನವನ್ನು ಬೆನ್ನಟ್ಟಿ ಚಾಲಕನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಲಾರಿಗಳನ್ನು ರಸ್ತೆಗೆ ಅಡ್ಡ ನಿಲ್ಲಿಸಿ ಅನ್ಲೋಡ್ ಮಾಡಿದರೆ ವಾಹನ ಸೀಜ್ : ಸಿಬಿ ರಿಷ್ಯಂತ್