ನಾಸಿಕ್:(ಮಹಾರಾಷ್ಟ್ರ)ಜಿಲ್ಲೆಯ ಸಿನ್ನರ್ ಪಟ್ಟಣದಲ್ಲಿ ಸೆರೆಸಿಕ್ಕ ಹಾವಿನೊಂದಿಗೆ ಸಾಹಸ ಪ್ರದರ್ಶನದಲ್ಲಿ ತೊಡಗಿದ್ದ ಉರಗಪ್ರೇಮಿ ಮುತ್ತಿಡಲು ಹೋಗಿ ತುಟಿಗೆ ಹಾವು ಕಚ್ಚಿಸಿಕೊಂಡು ಸಾವಿಗೀಡಾದ ಘಟನೆ ನಡೆದಿದೆ. ಉರಗಪ್ರೇಮಿ ನಾಗೇಶ್ ಭಲೇರಾವ್ ಮೃತ ದುರ್ದೈವಿ.
ವರ್ಕ್‌ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಉರಗಪ್ರೇಮಿ ನಾಗೇಶ್ ಭಾಲೇರಾವ್, ಸ್ಥಳವೊಂದರಲ್ಲಿ ಹಿಡಿದ ಹಾವನ್ನು ಸಿನ್ನಾರ್ ಕಾಲೇಜು ಮುಂಭಾಗದ ಕೆಫೆಗೆ ತಂದಿದ್ದಾನೆ. ಕೆಫೆ ಮಾಲೀಕ ತನ್ನ ಸ್ನೇಹಿತನಾಗಿದ್ದರಿಂದ, ನಾಗೇಶ್ ತನ್ನ ಮೂವರು ಸ್ನೇಹಿತರೊಂದಿಗೆ ಕೆಫೆ ಮೇಲಿನ ಕಟ್ಟಡದ ಟೆರೇಸ್‌ನಲ್ಲಿ ಹಾವನ್ನು ಒಯ್ದಿದ್ದಾನೆ.
ಈ ವೇಳೆ ನಾಗೇಶ್ ಹಾವಿಗೆ ಮುತ್ತಿಡುವ ಪ್ರಯತ್ನ ಮಾಡಿದ್ದಾನೆ. ಹಾವು ತುಟಿಗೆ ಕಚ್ಚಿದ್ದು, ಕಡಿತದಿಂದ ನಾಗೇಶ್ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಇದನ್ನು ಗಮನಿಸಿದ ಆತನ ಸ್ನೇಹಿತರು ತಕ್ಷಣ ಆಂಬ್ಯುಲೆನ್ಸ್‌ಗೆ ಕರೆ ಮಾಡಿ ನಾಸಿಕ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ದ್ದಾರೆ. ಆಸ್ಪತ್ರೆಗೆ ತಲುಪುವಷ್ಟರಲ್ಲಿ ದೇಹ ಪೂರ್ತಿ ಹಾವಿನ ವಿಷ ಹರಡಿದ್ದರಿಂದ ಚಿಕಿತ್ಸೆ ವೇಳೆ ಉರಗಪ್ರೇಮಿ ನಾಗೇಶ್ ಮೃತಪಟ್ಟಿದ್ದಾನೆ.
ಯುವ ಉರಗ ಪ್ರೇಮಿಗಳು ಪ್ರಚಾರಕ್ಕಾಗಿ ಹಾವುಗಳೊಂದಿಗೆ ಹುಚ್ಚಾಟದ ಸೆಲ್ಫಿ ತೆಗೆದುಕೊಳ್ಳುತ್ತಾರೆ. ಈ ವ್ಯಾಮೋಹ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಂತಹ ಅಜಾಗೃತ ಘಟನೆಗಳಿಂದ ಯುವಕರು ಅಥವಾ ಉರಗಪ್ರೇಮಿಗಳು ಮೃತಪಟ್ಟಿರುವ ಘಟನೆಗಳು ಅಲ್ಲಿಲ್ಲಿ ಸಂಭವಿಸುತ್ತಿವೆ.