ಮುಂಬೈ : ಉದ್ಯಮಿ ಮುಖೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿತ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರಿಂದ ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದೆ.
ಸ್ಫೋಟಕಗಳು ತುಂಬಿದ್ದ ಎಸ್‌ಯುವಿ ಕಾರನ್ನು ಅಂಬಾನಿ ಅವರ ಅಂಟಿಲಿಯಾ ನಿವಾಸ ಸಮೀಪ ನಿಲ್ಲಿಸುವ ದಿನದಂದು ವಾಜೆ, ಇಂದೊಂದು ರಹಸ್ಯ ಕಾರ್ಯಾಚರಣೆ (secret operation) ಎಂದು ತನ್ನ ಅಧಿಕೃತ ಚಾಲಕನಿಗೆ ಹೇಳಿದ್ದ ಎಂದು ಚಾರ್ಜ್‌ಶೀಟ್‌ನಲ್ಲಿ ಎನ್ಐಎ ತಿಳಿಸಿದೆ.
ಇದೇ ಫೆಬ್ರವರಿ 25ರಂದು ನಡೆದಿದ್ದ ಘಟನೆಯಲ್ಲಿ ಸಚಿನ್ ವಾಜೆ ಹಾಗೂ ಇತರೆ 9 ಮಂದಿ ಆರೋಪಿಗಳಿಗೆ ಇರುವ ಸಂಪರ್ಕದ ಬಗ್ಗೆ ಚಾಲಕನ ಹೇಳಿಕೆಯನ್ನು ಎನ್ಐಎ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಿದೆ. ಅದನ್ನೀಗ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ. ಫೆಬ್ರವರಿ 24 ಮತ್ತು 25ರ ಮಧ್ಯರಾತ್ರಿಯಂದು ಅಂಬಾನಿ ಮನೆಯ ಬಳಿ ವಾಹನವನ್ನು ನಿಲ್ಲಿಸುವ ವಿಚಾರದ ಸಂಪೂರ್ಣ ಮಾಹಿತಿಯನ್ನು ಚಾಲಕ ಎನ್‌ಐಎಗೆ ವಿವರಿಸಿದ್ದಾರೆ.
ಫೆಬ್ರವರಿ 24ರ ಸಂಜೆ 5.30ರ ಸುಮಾರಿಗೆ ಮಹಾರಾಷ್ಟ್ರದ ಹಿಂದಿನ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರ ಅಧಿಕೃತ ನಿವಾಸವಾದ 'ಜ್ಞಾನೇಶ್ವರಿ' ಬಂಗಲೆಗೆ ಸಚಿನ್ ವಾಜೆ ಅವರನ್ನು ಕಾರಿನಲ್ಲಿ ಕರೆದೊಯ್ಯಲಾಯಿತು. ವಾಜೆ ಅವರು ದೇಶ್‌ಮುಖ್ ಅವರ ನಿವಾಸಕ್ಕೆ ಹೋಗಿ 1 ಗಂಟೆ ನಂತರ ಹೊರ ಬಂದರು.
ಇದಾದ ಬಳಿಕ ಅಂಬಾನಿ ಅವರ ಮನೆ ಮುಂದೆ ನಿಲ್ಲಿಸಬೇಕಿದ್ದ ಸ್ಫೋಟಕಗಳನ್ನು ತುಂಬಿದ್ದ ಮಹೀಂದ್ರಾ ಸ್ಕಾರ್ಪಿಯೋ ಕಾರು ಹಾಗೂ ಇನ್ನೋವಾ ಕಾರಿನ ನಂಬರ್ ಪ್ಲೇಟ್‌ಗಳನ್ನು ಬದಲಾಯಿಸುವಂತೆ ವಾಜೆ ತಮಗೆ ತಿಳಿಸಿದ್ದರು ಎಂದು ತನಿಖಾಧಿಕಾರಿಗಳಿಗೆ ಚಾಲಕ ತಿಳಿಸಿದ್ದಾನೆ.
ಇದನ್ನೂ ಓದಿ: ಅನಿಲ್ ದೇಶಮುಖ್ ವಿಚಾರಣಾ ವರದಿ ಸೋರಿಕೆ: ತನ್ನದೇ ಸಬ್ ಇನ್ಸ್‌ಪೆಕ್ಟರ್, ವಕೀಲರನ್ನು ಬಂಧಿಸಿದ CBI
ನಿರ್ದಿಷ್ಟ ಮಾರ್ಗದಲ್ಲೇ ಹೋಗು ಹಾಗೂ ಟೋಲ್ ಪ್ಲಾಜಾಗಳಲ್ಲಿ ಹಣ ಪಾವತಿ ಮಾಡುವಂತೆ ಹೇಳಿದರು. ತಡರಾತ್ರಿ 2.10ರಲ್ಲಿ ವಾಜೆ ಅವರು ಚಲಾಯಿಸುತ್ತಿದ್ದ ಸ್ಕಾರ್ಪಿಯೋ ಕಾರನ್ನು ಹಿಂಬಾಲಿಸಿಕೊಂಡು ಕಾರ್ಮಿಚೆಲ್ ರಸ್ತೆಯಲ್ಲಿ ಹೋದೆ. ಒಂದು ನಿರ್ದಿಷ್ಟ ಸ್ಥಳದಲ್ಲಿ ಕಾರನ್ನು ನಿಲ್ಲಿಸಿದರು. ಆಗ ನಾನು ಕೂಡ 40 ರಿಂದ 50 ಮೀಟರ್ ಅಂತರದಲ್ಲಿ ಇನ್ನೋವಾ ಕಾರನ್ನು ನಿಲ್ಲಿಸಿದೆ. ಬಳಿಕ ಮಾಸ್ಕ್ ಹಾಗೂ ಫೇಸ್ ಶೀಲ್ಡ್ ತೆರೆದು ಇನ್ನೋವಾ ಕಾರಿಗೆ ವಾಪಸ್ ಬಂದರು. ಬಳಿಕ ಮುಂದಕ್ಕೆ ಹೋಗುವಂತೆ ನನಗೆ ಸೂಚಿಸಿದರು.
ಘಟನೆ ದಿನ ಗುರುತಿನ ಚೀಟಿ ಕಳೆದುಕೊಂಡಿದ್ದ ವಾಜೆ!
ಕಾರಿನಲ್ಲಿ ಮುಂದಕ್ಕೆ ಹೋಗುತ್ತಿರಬೇಕಾದರೆ ತನ್ನ ಗುರುತಿನ ಚೀಟಿ ಕಳೆದು ಹೋಗಿರುವುದು ಗಮನಕ್ಕೆ ಬಂದಿದೆ. ಕಾರಿನಲ್ಲಿ ಇದೆಯೇ ಎಂದು ಪರಿಶೀಲಿಸುವಂತೆ ತಮಗೆ ಸೂಚಿಸಿದರು. ಆದರೆ, ಕಾರಿನಲ್ಲಿ ಗುರುತಿನ ಚೀಟಿ ಇರಲಿಲ್ಲ. ಬಳಿಕ ಥಾಣೆ ಜಿಲ್ಲೆಯಲ್ಲಿರುವ ತಮ್ಮ ಮನೆಗೆ ಬಂದು ಹುಡುಕಾಡಿದರು.
20 ನಿಮಿಷಗಳ ಬಳಿಕ ಮತ್ತೆ ಬಂದು ಸ್ಕಾರ್ಪಿಯೋ ಕಾರಿನಲ್ಲೇ ಗುರುತಿನ ಚೀಟಿ ಬಿಟ್ಟು ಬಂದಿರುವ ಸಾಧ್ಯತೆ ಇದೆ ಎಂದು ಹೇಳಿದರು. ಮುಂಜಾನೆ 4.30 ಸುಮಾರಿಗೆ ಮತ್ತೆ ಕಾರ್ಮಿಚೆಲ್ ರಸ್ತೆಗೆ ಹೋಗಿ ಸ್ಕಾರ್ಪಿಯೋ ಕಾರಿನ ಒಳಗಡೆ ಹೋಗಿ ಹುಡುಕಾಡಿ ವಾಪಸ್ ಬಂದರು. ಇದಾಗ ಬಳಿಕ ಥಾಣೆಗೆ ಹೋಗುವಂತೆ ತಮಗೆ ಸೂಚಿಸಿದರು ಎಂದು ಎನ್‌ಐಎ ಮುಂದೆ ಚಾಲಕ ವಿವರಿಸಿದ್ದಾರೆ.