ತುಮಕೂರು: ನಗರದ ಹೊರವಲಯದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳು ಒಂದು ರೀತಿಯ ಕ್ರಿಮಿನಲ್ ಚಟುವಟಿಕೆಗಳ ತಾಣವಾಗಿ ಪರಿವರ್ತನೆಗೊಂಡಿದೆ ಎನ್ನುವ ಗಂಭೀರ ಆರೋಪಗಳು ಕೇಳಿ ಬರುತ್ತಿವೆ.
ಹೆದ್ದಾರಿಯ ಇಕ್ಕೆಲಗಳಲ್ಲಿನ ನಿರ್ಜನ ಪ್ರದೇಶದಲ್ಲಿ ಮಹಿಳೆಯರ ಶವಗಳನ್ನು ಬಿಸಾಡಿ ಹೋಗುತ್ತಿರುವುದು ಆತಂಕಕಾರಿಯಾಗಿದೆ. 2019 ರಲ್ಲಿ ಜಿಲ್ಲೆಯಲ್ಲಿ ಒಟ್ಟು 36 ಅಪರಿಚಿತ ಮಹಿಳೆಯರ ಶವಗಳು ಇಲ್ಲಿ ಪತ್ತೆಯಾಗಿವೆ. ಅದ್ರಲ್ಲಿ ಇತ್ತೀಚೆಗೆ ತುಮಕೂರು ಹೊರವಲಯದಲ್ಲಿ ಮಹಿಳೆಯೊಬ್ಬರನ್ನು ಆರೋಪಿಗಳು ಸುಟ್ಟುಹಾಕಿ ಪರಾರಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ತುಮಕೂರು ಜಿಲ್ಲೆಯಲ್ಲಿ ಪದೇ ಪದೇ ಮಹಿಳೆಯರ ಅನಾಥ ಶವಗಳು ಪತ್ತೆಯಾಗುತ್ತಿವೆ. ಬಹುತೇಕ ಪ್ರಕರಣಗಳ ತನಿಖೆ ಕೂಡ ನಡೆಯುತ್ತಿದೆ. ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನೆಲಹಾಳ್ ಸಮೀಪ ಅಪರಿಚಿತ ಮಹಿಳೆಯನ್ನು ಕೊಲೆ ಮಾಡಿ, ಸುಟ್ಟು ಹಾಕಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿ ಸಮೀಪದ ಕ್ಯಾತಸಂದ್ರದ ಬಳಿಯೂ ಸಹ ಮಹಿಳೆ ಕತ್ತುಕೊಯ್ದು ಚಿನ್ನಾಭರಣ ದೋಚಲಾಗಿತ್ತು.
ಇದಲ್ಲದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಾಬಸ್ಪೇಟೆಗೆ ಹೊಂದಿಕೊಂಡಂತೆ ಇರುವ ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ಅಪರಿಚಿತ ಮಹಿಳೆಯೊಬ್ಬರ ಶವ ಪತ್ತೆಯಾಗಿತ್ತು. ಈ ಎಲ್ಲಾ ಕೇಸ್ಗಳು ನಿಗೂಢವಾಗಿಯೇ ಉಳಿದಿವೆ. ಪೊಲೀಸರು ಎಷ್ಟೇ ಹರಸಾಹಸ ಪಟ್ಟರೂ ಅಪರಿಚಿತ ಮಹಿಳೆಯರ ಶವಗಳ ಗುರುತು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. 2019 ರಲ್ಲಿ ಪತ್ತೆಯಾದ 36 ಮಹಿಳೆಯರ ಶವಗಳಲ್ಲಿ ಕೇವಲ 9 ಶವಗಳ ಗುರುತು ಪತ್ತೆಯಾಗಿದೆ. ಇನ್ನುಳಿದಂತೆ ಶವದ ಹಿನ್ನೆಲೆ ಪತ್ತೆಯಾಗದಿರುವುದು ದುರಂತ.