ತುಮಕೂರು : ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ದೇವರಾಯನದುರ್ಗ ಗಿರಿ ಶಿಖರವು ಅಪರೂಪದಿಂದ ಕೂಡಿದ್ದಾಗಿದ್ದು, ಇದು ದೂರದಿಂದ ಪ್ರಾಣಿ ಆಕಾರದಲ್ಲಿ ಗೋಚರಿಸುತ್ತದೆ ಎಂಬ ನಂಬಿಕೆ ಇಲ್ಲಿರುವ ಶ್ರೀ ಯೋಗನರಸಿಂಹಸ್ವಾಮಿ ಭಕ್ತರದ್ದಾಗಿದೆ.
ಇಲ್ಲಿರುವ ಶ್ರೀ ಯೋಗ ನರಸಿಂಹ ಸ್ವಾಮಿ ಮತ್ತು ಭೋಗ ನರಸಿಂಹ ಸ್ವಾಮಿಯ ಎರಡು ದೇಗುಲಗಳು ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿವೆ. ಬೆಟ್ಟದ ಮೇಲ್ಭಾಗದಲ್ಲಿ ಯೋಗನರಸಿಂಹಸ್ವಾಮಿ ದೇಗುಲ ಇದ್ದರೆ ಕೆಳಭಾಗದಲ್ಲಿ ಭೋಗನರಸಿಂಹಸ್ವಾಮಿ ದೇಗುಲವಿದೆ.
ಇದನ್ನು ಭಕ್ತರು ಕರಿಗಿರಿ ಕ್ಷೇತ್ರ ಎಂದು ಕೂಡ ಕರೆಯುತ್ತಾರೆ. ಎರಡು ದೇಗುಲಗಳು ಇರುವಂತಹ ಗಿರಿಶಿಖರ ಆನೆಯ ಆಕೃತಿಯಲ್ಲಿ ಕಂಡುಬರುತ್ತಿರುವುದು ವಿಶೇಷವಾಗಿದೆ. ಹೀಗಾಗಿ ಭಕ್ತರು ತಲತಲಾಂತರದಿಂದ 'ಕರಿ ಎಂದರೆ ಆನೆ ಗಿರಿ ಎಂದರೆ ಶಿಖರ' ಎಂದು ಬಣ್ಣಿಸುತ್ತಿದ್ದಾರೆ.
ಹೀಗೆ ಆನೆಯ ಆಕಾರದಲ್ಲಿ ಕಂಡುಬರುವ ಈ ಗಿರಿಯಲ್ಲಿ ನರಸಿಂಹಸ್ವಾಮಿ ಪ್ರತಿಷ್ಠಾಪನೆಗೊಂಡಿದ್ದಾನೆ. ದೂರ್ವಾಸ ಮಹರ್ಷಿಗಳು ದೇಶದಲ್ಲಿ ಎಂಟು ಕಡೆ ನರಸಿಂಹಸ್ವಾಮಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿದ್ದು, ಅದರಲ್ಲಿ ದೇವರಾಯನದುರ್ಗದಲ್ಲಿ ಎರಡೂ ಕಡೆ ಪ್ರತಿಷ್ಠಾಪನೆ ಮಾಡಿದ್ದಾರೆ ಎಂಬುದು ಭಕ್ತರ ಅಪಾರ ನಂಬಿಕೆ ಆಗಿದೆ.