ತುಮಕೂರು: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಗಣನೀಯವಾಗಿ ತಗ್ಗಿದೆ. ಕೊರೊನಾ ಎರಡನೇ ಅಲೆ ಆರಂಭದಲ್ಲಿ ಶೇ. 40ಕ್ಕಿಂತ ಹೆಚ್ಚಿದ್ದ ಪಾಸಿಟಿವಿಟಿ ಪ್ರಮಾಣ ಪ್ರಸ್ತುತ ಶೇ. 4.5ಕ್ಕೆ ಇಳಿಕೆಯಾಗಿದೆ.
ಕೋವಿಡ್ ಸೋಂಕಿನ ಪೂರ್ಣ ನಿಯಂತ್ರಣಕ್ಕೆ ಜಿಲ್ಲಾಡಳಿತ ಶ್ರಮಿಸುತ್ತಿದೆ. ಪ್ರತಿನಿತ್ಯ 6,500 ರಿಂದ 7,000 ಸಾವಿರ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದ್ದಾರೆ.
ಸರ್ಕಾರದ ನಿರ್ದೇಶನದಂತೆ ಲಾಕ್ಡೌನ್ ಸಡಿಲಿಕೆ ಮಾಡಲಾಗಿದ್ದು, ಮುಂದಿನ 15 ದಿನಗಳ ಕಾಲ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆಗಳನ್ನು ಸತತವಾಗಿ ನಡೆಸಲು ನಿರ್ಧರಿಸಲಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಬರುವವರಿಗೆ ಕಡ್ಡಾಯ ಕೋವಿಡ್ ಪರೀಕ್ಷೆ ಮಾಡಲು ಸೂಚಿಸಲಾಗಿದೆ.
ಆರೋಗ್ಯ ಇಲಾಖೆಯೊಂದಿಗೆ ನಡೆದ ಸಭೆಯಲ್ಲಿ ಮಾರುಕಟ್ಟೆ, ಬ್ಯಾಂಕ್ ಸೇರಿದಂತೆ ಅತೀ ಹೆಚ್ಚು ಜನಸಂದಣಿಯುಂಟಾಗುವ ಗಾರ್ಮೆಂಟ್ಸ್, ಕೈಗಾರಿಕೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಟೆಸ್ಟ್ ನಡೆಸಲು ಸೂಚನೆ ನೀಡಲಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸೋಂಕಿನ ಲಕ್ಷಣಗಳುಳ್ಳ ಸಿಬ್ಬಂದಿ ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೊಳಗಾಗಲು ತಿಳಿಸಲಾಗಿದೆ ಎಂದರು.
ಶೇ. 25ರಷ್ಟು ಲಸಿಕಾಭಿಯಾನ ಯಶಸ್ವಿ:
ಜಿಲ್ಲೆಯಲ್ಲಿ ಈವರೆಗೂ ನಡೆಸಿದ ಕೊರೊನಾ ಲಸಿಕಾ ಅಭಿಯಾನದಲ್ಲಿ ಶೇ. 25ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ. ಸರ್ಕಾರದ ಮಾರ್ಗಸೂಚಿಯನ್ವಯ ಲಸಿಕೆ ಹಾಕುವ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ. ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ ಸುಮಾರು 20 ಲಕ್ಷ ಜನರಿದ್ದು, 6,63,838 ಮಂದಿಗೆ ಲಸಿಕೆ ನೀಡಲಾಗಿದೆ. ಇದರಲ್ಲಿ 18ರಿಂದ 44 ವರ್ಷದೊಳಗಿನ 71 ಸಾವಿರಷ್ಟು ಜನರಿದ್ದಾರೆ. 18 ವರ್ಷ ಮೇಲ್ಪಟ್ಟ ಎಲ್ಲಾ ವಯೋಮಾನದವರಿಗೂ ಸೇರಿ ಒಟ್ಟು 5,45,171 ಜನರಿಗೆ ಮೊದಲ ಡೋಸ್ ಹಾಗೂ 1,18,667 ಮಂದಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಇದರಲ್ಲಿ ಮುಂಚೂಣಿ ಕಾರ್ಯಕರ್ತರು ಸಹ ಸೇರ್ಪಡೆಗೊಂಡಿದ್ದಾರೆ ಎಂದರು.
ಇದನ್ನೂ ಓದಿ: ಸ್ನೇಹಿತರಿಂದಲೇ ನಾಲ್ವರು ಅಪ್ರಾಪ್ತೆಯರ ಮೇಲೆ ಗ್ಯಾಂಗ್ ರೇಪ್!