ತುಮಕೂರು: ಭೌಗೋಳಿಕ ಐಕ್ಯತೆ ಬಗ್ಗೆ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗಳು ಆಗಬೇಕಿದೆ ಎಂದು ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾನಿಲಯದ ಸರ್. ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಯುವ ಸಬಲೀಕರಣ ಕುರಿತು ಹಮ್ಮಿಕೊಳ್ಳಲಾಗಿದ್ದ ಸಂವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ತುಮಕೂರು ಜಿಲ್ಲೆ ಆಗಿನ ಮೈಸೂರು ಪ್ರಾಂತ್ಯಕ್ಕೆ ಸೇರಿತ್ತು, ನಮ್ಮ ತಾತನ ಕಾಲದಿಂದಲೂ ತುಮಕೂರು ಮತ್ತು ಮೈಸೂರು ನಡುವೆ ಅವಿನಾಭಾವ ಸಂಬಂಧವಿದೆ. ಮೈಸೂರು ಎಂಬ ಹೆಸರಿನ ಮೂಲಕ ಮೈಸೂರು ಪಾಕ್, ಮೈಸೂರ್ ಸ್ಯಾಂಡಲ್ ಸೋಪ್ ಎಂದು ಹೇಗೆ ಹೆಸರು ಬಂದಿದೆಯೋ, ಅದೇ ರೀತಿ ಭಾರತದಲ್ಲಿ ತಿಪಟೂರು ಕೊಬ್ಬರಿ ಹೆಸರುವಾಸಿಯಾಗಿದೆ ಎಂದರು.
ತುಮಕೂರು ವಿವಿಯಿಂದ ಸ್ಥಳೀಯ ವಿಷಯಗಳ ಕುರಿತು ಕೆಲ ಸಂಶೋಧನೆಗಳು ಆಗಬೇಕಿದೆ. ಪರಿಸರ ಸಂರಕ್ಷಣೆಗಾಗಿ ಪ್ರತಿಯೊಬ್ಬರು ಕೆಲಸ ಮಾಡಬೇಕು, ಎಲ್ಲದಕ್ಕೂ ಸರ್ಕಾರದ ಅನುದಾನವನ್ನು ನಿರೀಕ್ಷಿಸಬಾರದು. ನಮ್ಮ ಮನೆಯಿಂದಲೇ ಸ್ವಚ್ಛತೆಯ ಕಾರ್ಯ ಪ್ರಾರಂಭವಾಗಬೇಕು. ಸ್ವಚ್ಛತೆಯ ರಾಯಭಾರಿಯಾಗಿರುವ ಮೈಸೂರು ಮಾತ್ರ ಸ್ವಚ್ಚವಾಗಿದ್ದರೆ ಸಾಲದು, ಕರ್ನಾಟಕ, ಭಾರತವೂ ಸಹ ಸ್ವಚ್ಛವಾಗಬೇಕು. ನಮ್ಮ ದೇಶದ ಸ್ವಚ್ಛತೆಯ ಬಗ್ಗೆ ಇತರರಿಗೂ ಅರಿವಾಗಬೇಕು ಎಂದರು.