ಬೆಂಗಳೂರು : ಇನ್ನು ಮುಂದೆ ನಾಗರಿಕರು ತಮ್ಮ ಸ್ವಂತ ಜಮೀನಿನ ನಕ್ಷೆಯನ್ನು 'ಸ್ವಾವಲಂಬಿ ಆ್ಯಪ್' ಮೂಲಕ ಸಮೀಕ್ಷೆ ಮಾಡಿ ಸಿದ್ಧಪಡಿಸಿಕೊಳ್ಳುವ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಈ ಮೂಲಕ ರೈತರು ಮತ್ತು ನಾಗರಿಕರು ತಮ್ಮ ಸ್ವಂತ ಜಮೀನಿನ ಸ್ಕೆಚ್, ಪೋಡಿ, ಭೂ ಪರಿವರ್ತನಾ ನಕ್ಷೆಗಳನ್ನು ತಾವೇ ತಯಾರಿಸಿಕೊಳ್ಳಬಹುದಾಗಿದೆ. ಸ್ವಾವಲಂಬಿ ಆ್ಯಪ್ ಮೂಲಕ ಸ್ವಯಂ ಸಮೀಕ್ಷೆ ನಡೆಸಿ ಸ್ವಂತ ನಕ್ಷೆ ಸಿದ್ಧಪಡಿಸಿಕೊಳ್ಳುವ ವ್ಯವಸ್ಥೆಯನ್ನು ಜಾರಿಗೊಳಿಸಿ ಕಂದಾಯ ಇಲಾಖೆ ಆದೇಶಿಸಿದೆ.
ಭೂಮಾಪನ ಇಲಾಖೆಗೆ ಸ್ವಂತ ಜಮೀನಿನ ನಕ್ಷೆಗಾಗಿ ರೈತರು ಮತ್ತು ನಾಗರಿಕರು ಅರ್ಜಿ ಸಲ್ಲಿಸುತ್ತಾರೆ. ಸಲ್ಲಿಸಿದ ಅರ್ಜಿಗಳನ್ನು ಸರ್ಕಾರಿ ಭೂಮಾಪಕರು ಅಥವಾ ಪರವಾನಿಗೆ ಭೂಮಾಪಕರುಗಳಿಂದ ಸಿದ್ಧಪಡಿಸಲಾಗುತ್ತದೆ. ಇತ್ತೀಚೆಗೆ ಅರ್ಜಿಗಳು ಹೆಚ್ಚು ಬರುತ್ತಿರುವುದರಿಂದ ನಿಗದಿತ ಸಮಯಕ್ಕೆ ಸೇವೆ ನೀಡಲಾಗುತ್ತಿಲ್ಲ. ಹೀಗಾಗಿ, ನಾಗರಿಕರು ಸ್ವಂತ ನಕ್ಷೆ ಮಾಡುವ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಹೆಚ್ಚು ಅರ್ಜಿಗಳು ನಿಗದಿತ ಸಮಯಕ್ಕೆ ಇತ್ಯರ್ಥವಾಗದಿರುವ ಕಾರಣ ನಾಗರಿಕರು ಹಲವು ತಿಂಗಳುಗಳ ಕಾಲ ಕಾಯಬೇಕಾಗುತ್ತದೆ. ಇದನ್ನು ತಪ್ಪಿಸಲು 11ಇ, ಪೋಡಿ, ವಿಭಾಗ ಮಾಡಿಕೊಳ್ಳಲು ಸ್ವಂತ ಜಮೀನಿಗೆ ತಾವೇ ಸಮೀಕ್ಷೆ ನಡೆಸಿ ನಕ್ಷೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಇದರಿಂದ ಸಮಯ ಉಳಿತಾಯವಾಗಲಿದೆ.
ರೈತರು ತಮ್ಮ ಜಮೀನಿನ ಒಂದು ಭಾಗವನ್ನು ಮಾರಾಟ ಮಾಡಲು ನೋಂದಣಿ ನಕ್ಷೆಯನ್ನು ಸಿದ್ಧಪಡಿಸಬಹುದು. ಜಮೀನಿನಲ್ಲಿ ಪೋಡಿ ಮಾಡಿಕೊಡುವ ಬಗ್ಗೆ ನಕ್ಷೆ ತಯಾರಿಸಬಹುದು. ಜಮೀನಿನ ಒಂದು ಭಾಗವನ್ನು ಕೃಷಿಯೇತರ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿಸಿಕೊಳ್ಳಲು ನಕ್ಷೆ ಮಾಡಬಹುದಾಗಿದೆ.
ಇದನ್ನೂ ಓದಿ: ಕೆರೂರು ಏತ ನೀರಾವರಿ ಯೋಜನೆಗೆ ಸಿಎಂ ಬೊಮ್ಮಾಯಿ ಶಂಕುಸ್ಥಾಪನೆ..
ಏನಿದು ಸ್ವಾವಲಂಬಿ ಆ್ಯಪ್? : ನಾಗರಿಕರಿಗೆ ಮತ್ತು ರೈತರಿಗಾಗಿ ಕಂದಾಯ ಇಲಾಖೆಯು ‘ಸ್ವಾವಲಂಬಿ ಆ್ಯಪ್’ ಅನ್ನು ಅಭಿವೃದ್ಧಿಪಡಿಸಿದೆ. ಯಾವುದೇ ತಕರಾರು ಇಲ್ಲದ ಜಮೀನಿನ ನಕ್ಷೆಯನ್ನು ತಯಾರಿಸಬಹುದು. ಒಂದು ಕುಟುಂಬದ ಸದಸ್ಯರು ಮನೆಯಲ್ಲಿಯೇ ಕುಳಿತು ತಮ್ಮ ಜಮೀನು ಭಾಗ ಮಾಡಿಕೊಳ್ಳಬಹುದು. ನಾಗರಿಕರು/ರೈತರು ತಮ್ಮ ಜಮೀನಿನ ನಕ್ಷೆಯನ್ನು ಸಿದ್ಧಪಡಿಸಿದ ಬಳಿಕ ಭೂದಾಖಲೆಗಳ ಕಚೇರಿಗೆ ಅಪ್ಲೋಡ್ ಮಾಡಿದರೆ ಸಾಕು. ನಂತರ ನೋಂದಣಿ ಇಲಾಖೆಯಲ್ಲಿ ಆ ನಕ್ಷೆಯನ್ನು ಗಡಿಗಳಿಗನುಗುಣವಾಗಿ ನೋಂದಣಿ ಮಾಡಲಾಗುತ್ತದೆ.