ತುಮಕೂರು: ಉತ್ತರ ಕರ್ನಾಟಕ ಭಾಗದಲ್ಲಿ ನೆರೆ ಹಾವಳಿಯಿಂದ ತತ್ತರಿಸಿರುವ ತಮ್ಮ ಪೋಷಕರ ಸ್ಥಿತಿಗತಿ ಅರಿಯಲು ಸಿದ್ಧಗಂಗಾ ಮಠದಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಹಾತೊರೆಯುತ್ತಿದ್ದಾರೆ.
ಹೀಗಾಗಿ ನಿತ್ಯ ಮಠದ ಸಮೀಪ ಇರುವ ಅಂಗಡಿಗಳಲ್ಲಿನ ಕಾಯಿನ್ ಬೂತ್ಗಳಲ್ಲಿ ನಾಮುಂದು, ತಾಮುಂದು ಎಂದು ತಮ್ಮ ಪೋಷಕರ ಮೊಬೈಲ್ಗಳಿಗೆ ಸಂಪರ್ಕಿಸಲು ಯತ್ನಿಸುತ್ತಿದ್ದಾರೆ. ಕೆಲ ಮಕ್ಕಳಿಗೆ ತಮ್ಮ ಪೋಷಕರ ಮೊಬೈಲ್ ನೆಟ್ವರ್ಕ್ ಲಭ್ಯವಾಗಿ ಅವರ ಪರಿಸ್ಥಿತಿಯನ್ನು ಕೇಳಿ ಮಮ್ಮಲ ಮರುಗಿದರೆ, ಇನ್ನೂ ಕೆಲ ಮಕ್ಕಳು ಮೊಬೈಲ್ ಸಂಪರ್ಕ ಸಾಧ್ಯವಾಗದೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಉತ್ತರ ಕರ್ನಾಟಕ ಭಾಗದ ಸಾವಿರಾರು ಮಕ್ಕಳು ಮಠದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮಕ್ಕಳನ್ನು ಊರಿಗೆ ಕಳುಹಿಸಬೇಡಿ. ಇಲ್ಲಿ ನೆರೆಹಾವಳಿಯಿಂದ ಸಾಕಷ್ಟು ತೊಂದರೆಗಳು ಆಗಿವೆ ಎಂಬ ಮಾಹಿತಿಯನ್ನು ಮಠಕ್ಕೆ ಪೋಷಕರು ಈಗಾಗಲೇ ತಿಳಿಸಿದ್ದಾರೆ.