ತುಮಕೂರು: ನನ್ನ ಪಕ್ಷದ ಬಾಗಿಲು ಮುಚ್ಚಿದೆ. ನಾನು ಎಲ್ಲಿಗೆ ಹೋಗಲಿ?, ನಿಮ್ಮ ಹತ್ತಿರವೇ ಬರಬೇಕು. ನೀವೇ ನನಗೆ ಅಧಿಕಾರ ಕೊಡಬೇಕು ಎಂದು ಹೇಳುವ ಮೂಲಕ ಶಾಸಕ ಎಸ್.ಆರ್.ಶ್ರೀನಿವಾಸ್ ಕಾಂಗ್ರೆಸ್ ಸೇರುವುದನ್ನು ಬಹುತೇಕ ಖಚಿತಪಡಿಸಿದ್ದಾರೆ.
ಗುಬ್ಬಿ ತಾಲೂಕಿನ ಕಲ್ಲುಗುಡಿ ಗ್ರಾಮದಲ್ಲಿ ಗುರುವಾರ ನಡೆದ ವಾಲ್ಮೀಕಿ ಜಯಂತಿ ಹಾಗೂ ಕೆರೆಗೆ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಮತ್ತು ಕೆ.ಎನ್.ರಾಜಣ್ಣ ಇನ್ನು ಮುಂದೆ ವಿರೋಧಿಗಳಲ್ಲ. ಇಬ್ಬರೂ ಜೊತೆಯಾಗಿ ನಡೆಯುತ್ತೇವೆ ಎಂದರು.
ಮಾಜಿ ಶಾಸಕ ಕೆ.ಎನ್.ರಾಜಣ್ಣನವರು ಜೆಡಿಎಸ್ ಪಕ್ಷದಲ್ಲಿದ್ದಾಗ ಅವರನ್ನು ಉಳಿಸಿಕೊಳ್ಳಿ ಎಂದು ಹೇಳಿದ್ದೆ. ಆದರೆ ಅವರನ್ನು ಉಳಿಸಿಕೊಳ್ಳಲಿಲ್ಲ. ಅವರು ಪಕ್ಷ ಬಿಟ್ಟು ಹೊರನಡೆದರು. ಆದರೆ ಮುಂದಿನ ದಿನಗಳಲ್ಲಿ ಒಬ್ಬರಿಗೊಬ್ಬರು ದೂರವಾಗುವುದಿಲ್ಲ ಎಂದರು.
ಇದೇ ವೇಳೆ ಸಂಸದ ಬಸವರಾಜ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಶ್ರೀನಿವಾಸ್, ಡ್ಯಾಂ ಕಟ್ಟಿಸುತ್ತೇನೆ. ರೈತರಿಗೆ ಒಂದು ಕೋಟಿ ಕೊಡುತ್ತೇನೆ. ಮನೆ, ಜಮೀನು ಕೊಡಿಸುತ್ತೇನೆ ಅಂತಾ ಹೇಳುತ್ತಿದ್ರು. ನಾನು ಮಾಡಿಸಿದ ಕಾರ್ಯಗಳನ್ನು ತಾನು ಮಾಡಿಸಿದ್ದು ಅಂತಿದ್ದಾರೆ. ನನಗೆ ಸುಮಾರು ಇಪ್ಪತ್ತು ವರ್ಷಗಳಿಂದ ಅವರ ಜೊತೆ ಒಡನಾಟವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.