ತುಮಕೂರು : ಪ್ರಿಯತಮೆಯ ಆತ್ಮಹತ್ಯೆಯಿಂದ ಮನನೊಂದು ಆಕೆಯ ಪ್ರಿಯಕರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನಲ್ಲಿ ನಡೆದಿದೆ. ಮೃತ ವ್ಯಕ್ತಿಯ ಶವ ಅರಣ್ಯಪ್ರದೇಶದಲ್ಲಿ ಆರು ತಿಂಗಳ ಬಳಿಕ ಅಸ್ತಿಪಂಜರವಾಗಿ ಪತ್ತೆಯಾಗಿದೆ. ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಸಮೀಪದ ಅರಣ್ಯ ಪ್ರದೇಶದಲ್ಲಿ ಶವವು ಕಂಡು ಬಂದಿದೆ.
ಮೃತಪಟ್ಟ ವ್ಯಕ್ತಿಯನ್ನು ಸಂತೋಷ್ (28) ಎಂದು ಗುರುತಿಸಲಾಗಿದೆ. ಈತ ಕುಣಿಗಲ್ ತಾಲೂಕಿನ ಅರಮನೆ ಹೊನ್ನಮಚನಹಳ್ಳಿ ಗ್ರಾಮದವರಾಗಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದರು. ಸಂತೋಷ್ ಎಂಬಾತನು ಶಾಲಿನಿ ಎಂಬಾಕೆಯನ್ನು ಪ್ರೀತಿಸುತ್ತಿದ್ದನು. ಆದರೆ, ಶಾಲಿನಿ ಪೋಷಕರು ಇಬ್ಬರ ಮದುವೆಗೆ ನಿರಾಕರಿಸಿದ್ದರು. ಇದರಿಂದಾಗಿ ಅಕ್ಟೋಬರ್ 2021ರಂದು ಶಾಲಿನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು.
ಈ ಘಟನೆಯಿಂದ ತೀವ್ರ ಮನನೊಂದಿದ್ದ ಸಂತೋಷ್ ತಾನು ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಆದರೆ, ಪೋಷಕರು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದರು. ಹೀಗಿದ್ದರೂ ಕೂಡ ಆತ ಮನೆಯಿಂದ ಕಣ್ಮರೆಯಾಗಿದ್ದ. ಇದೀಗ ಅರಣ್ಯ ಪ್ರದೇಶದಲ್ಲಿ ಸಂತೋಷ್ನ ಮೃತದೇಹ ಅಸ್ತಿಪಂಜರದ ಸ್ವರೂಪದಲ್ಲಿ ಪತ್ತೆಯಾಗಿದೆ. ಈ ಸಂಬಂಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಧಾರವಾಡ ಭೀಕರ ಅಪಘಾತದಲ್ಲಿ ಬೆಳಗಾವಿಯ ಬಾಲಕಿ ಸಾವು.. ಹುಟ್ಟೂರಲ್ಲಿ ಅಂತ್ಯಕ್ರಿಯೆ!