ತುಮಕೂರು: ಕೊರೊನಾ ವಿರುದ್ಧ ಹೋರಾಟದಲ್ಲಿ ಗಟ್ಟಿಯಾಗಿ ನಿಂತು ಜಯದ ಹಾದಿ ನೋಡುತ್ತಿರುವ ಪೊಲೀಸರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ತಮ್ಮ ಪರಿಸ್ಥಿತಿಯನ್ನ ಬದಿಗೊತ್ತಿ ಕೆಲಸ ನಿರ್ವಹಿಸುತ್ತಿದ್ದಾರೆ. ಅಂತೆಯೇ ಗರ್ಭಿಣಿಯಾಗಿರುವ ಕೆಎಎಸ್ ಅಧಿಕಾರಿಯೊಬ್ಬರು ಜನ ಸೇವೆಗೆ ನಿಂತಿರುವುದು ಶ್ಲಾಘನೀಯ ವಿಚಾರ.
ಜಿಲ್ಲೆಯ ಸಿರಾ ಪಟ್ಟಣದ ತಹಶೀಲ್ದಾರ ನಹೀದ್ ಝಮ್ ಅವರು ಐದು ತಿಂಗಳ ಗರ್ಭಿಣಿಯಾಗಿದ್ದರೂ ಕೂಡಾ ಕರ್ತವ್ಯ ನಿಷ್ಠೆಯಿಂದ ಜನ ಸೇವೆಗೆ ನಿಂತಿದ್ದಾರೆ. ಈಗಾಗಲೇ ಸಿರಾ ಪಟ್ಟಣದಲ್ಲಿ 2 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು ಮುಂಜಾಗೃತ ಕ್ರಮವಾಗಿ ತಾವೇ ಖುದ್ದುನಿಂತು ಕಾರ್ಯ ವೈಖರಿಯನ್ನು ನೋಡುತ್ತಿದ್ದಾರೆ.
ಈಗಾಗಲೇ 32 ಜನರನ್ನು ಹೋಮ್ ಕ್ವಾರಂಟೈನ್ನಲ್ಲಿ ಇರಿಸಲಾಗಿದ್ದು, ನಿತ್ಯ ಅವರಿರುವಂತಹ ಪ್ರದೇಶಕ್ಕೆ ತೆರಳಿ ಪರಿಶೀಲಿಸುತ್ತಿದ್ದಾರೆ. ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಪತಿ ಮೊಹತುರ್ ಅವರು ಸದ್ಯ ಸಿರಾ ಪಟ್ಟಣಕ್ಕೆ ಬಂದು ಜೊತೆಯಲ್ಲಿ ಉಳಿದುಕೊಂಡಿದ್ದಾರೆ.
ಈ ಕುರಿತು ಈಟಿವಿ ಭಾರತ ಜೊತೆ ಮಾತನಾಡಿದ ನಹೀದ ಝಮ್, ಇಂತಹ ಸಂದರ್ಭದಲ್ಲಿ ಸಾಮಾಜಿಕ ಸೇವೆ ಮಾಡುವ ಅವಕಾಶ ಜೀವನದಲ್ಲಿ ಸಿಗುವುದಿಲ್ಲ. ಆರೋಗ್ಯವನ್ನು ಸುಧಾರಿಸಿಕೊಂಡು ಕೆಲಸದಲ್ಲಿ ತೊಡಗಿರುವುದು ನನಗೆ ಸಂತೋಷ ತಂದಿದೆ. ಹೊಸ ಹೊಸ ಚಾಲೆಂಜ್ಗಳನ್ನು ಎದುರಿಸುತ್ತಿದ್ದೇನೆ. ಪ್ರತಿದಿನ ಸರ್ಕಾರದ ಪ್ರೋಟೋಕಾಲ್ ಗಳನ್ನು ಪಾಲನೆ ಮಾಡುವುದು ವಿಭಿನ್ನವಾಗಿದೆ. ಮನೆಯಲ್ಲಿ ತಮ್ಮ ಪತಿ ಜೊತೆಯಲ್ಲಿದ್ದು ಆತ್ಮಸ್ಥೈರ್ಯವನ್ನು ತುಂಬುತ್ತಿದ್ದಾರೆ ಎಂದು ತಿಳಿಸಿದ್ದಾರೆ.