ತುಮಕೂರು: ರಾಜ್ಯದ ಅತಿದೊಡ್ಡ ಕೈಗಾರಿಕಾ ಪ್ರದೇಶಗಳಲ್ಲಿ ಒಂದಾಗಿರುವ ತುಮಕೂರಿನ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಕೆಐಎಡಿಬಿಯ ಕೆಲ ನೀತಿ ನಿಯಮಾವಳಿಗಳಿಂದ ಅನೇಕ ಕೈಗಾರಿಕೆಗಳು ಮುಚ್ಚುವ ಸ್ಥಿತಿಗೆ ಬಂದಿವೆ.
ಬರೋಬ್ಬರಿ 13 ಸಾವಿರ ಎಕರೆ ವಿಸ್ತಾರ ಹೊಂದಿರುವ ಈ ಕೈಗಾರಿಕಾ ಪ್ರದೇಶದಲ್ಲಿನ ಕೈಗಾರಿಕೆಗಳಿಗೆ ಕೆಐಎಡಿಬಿ ಸೇಲ್ ಡೀಡ್ (ಕ್ರಯಪತ್ರ) ಅಂತಿಮ ದರ ಹೆಚ್ಚಿಸಿರುವುದು ಕೈಗಾರಿಕೋದ್ಯಮಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈಗಾಗಲೇ ಕೊರೊನಾ ಸೋಂಕಿನ ಅಬ್ಬರದಿಂದ ತತ್ತರಿಸಿ ಹೋಗಿರುವ ಕೈಗಾರಿಕೋದ್ಯಮಿಗಳಿಗೆ ಸೇಲ್ ಡೀಡ್ನ ದರ ಹೆಚ್ಚಳ ಇನ್ನಷ್ಟು ಬರೆ ಎಳೆದಿದೆ.
ತುಮಕೂರು-ಬೆಂಗಳೂರು, ಪುಣೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ತಲೆಯೆತ್ತಿರುವ ಈ ಕೈಗಾರಿಕಾ ಪ್ರದೇಶದಲ್ಲಿ ಜಪಾನೀಸ್ ಟೂಲ್ ಪಾರ್ಕ್, ಫುಡ್ ಪಾರ್ಕ್, ಹಿಮಾಲಯ ಡ್ರಗ್ಸ್, ಟೆಮೆಕ್, ಹೆವೆಲ್ಸ್ನಂತಹ ಬೃಹತ್ ಕಂಪನಿಗಳಿದ್ದು, ಸಾವಿರಾರು ಜನರಿಗೆ ಉದ್ಯೋಗ ನೀಡಿವೆ. ಸುಮಾರು 750ಕ್ಕೂ ಅಧಿಕ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಅಸ್ತಿತ್ವದಲ್ಲಿದ್ದು, 40 ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.
2008 ರಿಂದ 2013ವರೆಗೆ ಇಲ್ಲಿನ ಭೂಮಿಯನ್ನು ಎಕರೆಗೆ 24 ರಿಂದ 30 ಲಕ್ಷ ರೂ.ಗೆ ಲೀಸ್ ಕಮ್ ಡೀಡ್ಗೆ ನೀಡಲಾಗಿದೆ. ಆನಂತರ 2013 ರಿಂದ 2019 ವರೆಗೆ 68 ಲಕ್ಷ ರೂ.ಗೆ ಏರಿಕೆ ಮಾಡಲಾಗಿತ್ತು. ಪ್ರಸ್ತುತ 2019ರ ಸಾಲಿಗೆ ಏಕಾಏಕಿ ಪ್ರತಿ ಎಕರೆಗೆ ಒಂದು ಕೋಟಿ ಐದು ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಇದರಿಂದಾಗಿ ಕೈಗಾರಿಕಾ ಉದ್ಯಮಿಗಳಿಗೆ ದಿಕ್ಕೆ ತೋಚದಂತಾಗಿದೆ. ಈ ಪ್ರದೇಶದಲ್ಲಿನ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳು ಸ್ಥಳಾಂತರಗೊಳ್ಳುವ ಲೆಕ್ಕಾಚಾರದಲ್ಲಿವೆ.
ಕಳೆದ ಒಂದು ವರ್ಷದಿಂದ ಕೊರೊನಾ ಸೋಂಕಿನ ಆರ್ಭಟಕ್ಕೆ ಇಂಡಸ್ಟ್ರಿಯಲ್ ಏರಿಯಾದಲ್ಲಿದ್ದ ಶೇ. 50ಕ್ಕೂ ಹೆಚ್ಚು ಕೈಗಾರಿಕೆಗಳು ಬಾಗಿಲು ಮುಚ್ಚಿವೆ. ಇದ್ರಿಂದಾಗಿ ಸುಮಾರು 20 ಸಾವಿರ ಮಂದಿ ನೌಕರಿ ಕಳೆದುಕೊಂಡಿದ್ದಾರೆ. ಸ್ವತಃ ಸರ್ಕಾರವೇ ತಾನು ಜಾರಿಗೆ ತಂದಿದ್ದ ನಿಯಮಗಳನ್ನು ಗಾಳಿಗೆ ತೂರಿದೆ. ಇದರಿಂದ ಮಧ್ಯಮ, ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಿಗೆ ಪೆಟ್ಟು ನೀಡಿದಂತಾಗಿದೆ. ಕೊರೊನಾದಿಂದ ಚೇತರಿಸಿಕೊಳ್ಳುವುದೇ ಕಷ್ಟಕರವಾಗಿರುವಾಗ, ಸೇಡ್ ಡೀಡ್ ಅಂತಿಮ ದರ ಹೆಚ್ಚಳ ಕಂಗಾಲಾಗಿಸಿದೆ.
ಒಟ್ಟಾರೆ, ಕೈಗಾರಿಕಾಭಿವೃದ್ಧಿ ಪ್ರದೇಶದಲ್ಲಿ ವಿವಿಧ ಅಭಿವೃದ್ಧಿ ದೃಷ್ಟಿಯಿಂದ ಕೆಐಎಡಿಬಿಯ ಅನೇಕ ನಿಯಮಾವಳಿಗಳು ಉದ್ಯಮಿಗಳನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿವೆ. ಕೈಗಾರಿಕೋದ್ಯಮಿಗಳು ಕೈಗಾರಿಕಾಭಿವೃದ್ಧಿ ಪ್ರದೇಶದಿಂದ ಹೊರಹೋಗುವ ಮುನ್ನ ಸರ್ಕಾರ ಸೇಡ್ ಡೀಡ್ ಕುರಿತ ಗೊಂದಲ ಪರಿಹರಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಮೇಕೆದಾಟು ಯೋಜನೆ ಶೇ.100ರಷ್ಟು ಜಾರಿ: ದೆಹಲಿಯಲ್ಲಿ ಕರ್ನಾಟಕದ ಜನತೆಗೆ ಭರವಸೆ ನೀಡಿದ ಬಿಎಸ್ವೈ