ತುಮಕೂರು: ರಾಜ್ಯಸಭೆ ಚುನಾವಣೆಯಲ್ಲಿ ಯಾರ ಮಧ್ಯಸ್ಥಿಕೆ ಇಲ್ಲ, ಇಡೀ ಪಕ್ಷ ಒಗ್ಗಟ್ಟಿನಿಂದ ಅಭ್ಯರ್ಥಿಯನ್ನು ನಿಲ್ಲಿಸಿದ್ದೇವೆ. ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಏನೂ ಮಾತಾಡಿಲ್ಲ. ಯಾರ ಬೆಂಬಲಕ್ಕೂ ನಿಂತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ತುಮಕೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಭ್ಯರ್ಥಿಗಳನ್ನು ನಿಲ್ಲಿಸಿರುವುದು ಪಕ್ಷದ ತೀರ್ಮಾನವಾಗಿದೆ. ಇದರಲ್ಲಿ ಯಾವುದೇ ಬಿನ್ನಾಭಿಪ್ರಾಯವಾಗಲಿ, ಅಸಮಾಧಾನ ಇಲ್ಲ. ಚರ್ಚೆ ಮಾಡಿ ಪಕ್ಷದ ಹಿತದೃಷ್ಟಿಯಿಂದ ಅಭ್ಯರ್ಥಿಯನ್ನು ನೇಮಿಸಿದ್ದೇವೆ. ನಮ್ಮನ್ನು ಯಾರೂ ಸಂಪರ್ಕ ಮಾಡಿಲ್ಲ. ನಾವು ಯಾರನ್ನೂ ಸಂಪರ್ಕಿಸಿಲ್ಲ. ನಾವು ಅಭ್ಯರ್ಥಿ ಪರ ಆತ್ಮಸಾಕ್ಷಿ ಮತ ಕೇಳುತ್ತೇವೆ ಅಷ್ಟೇ ಎಂದು ಹೇಳಿದರು.
ದೆಹಲಿಯಲ್ಲಿ ಸಭೆ ಇದ್ದ ಕಾರಣ ಖರ್ಗೆಯವರು ಒಂದು ದಿನಕ್ಕೆ ಹೋಗಿ ಬಂದರು. ರಾಜ್ಯಸಭೆ ಚುನಾವಣೆ ಕುರಿತಾಗಿ ಅಲ್ಲ. ಎರಡನೇ ಅಭ್ಯರ್ಥಿಯ ಆಯ್ಕೆ ಎಲ್ಲರ ಸಮ್ಮತಿಯಿಂದಲೇ ಆಗಿದೆ. ನಮ್ಮ ಮತವನ್ನು ನಾವು ಕಾಪಾಡಿಕೊಳ್ಳುತ್ತೇವೆ. ಬೇರೆ ಪಾರ್ಟಿಯಲ್ಲೂ ನಮಗೂ ಆತ್ಮೀಯರು ಇದ್ದಾರೆ ಎಂದು ಹೇಳಿದರು.
ಕಾಂಗ್ರೆಸ್‌ನ ಎರಡನೇ ಅಭ್ಯರ್ಥಿ ಗೆಲ್ಲುವ ಸಾಧ್ಯತೆಗಳಿಲ್ಲ ಎಂಬ ಹೆಚ್‌ಡಿಕೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಿಕೆಶಿ, ನಾವು ಗೆಲ್ಲುತ್ತೇವೋ, ಸೋಲುತ್ತೇವೋ ಅನ್ನೋದು ಬೇರೆ ವಿಚಾರ. ಆದ್ರೆ ನಮ್ಮ ರಾಜಕಾರಣವನ್ನು ನಾವು ಮಾಡುತ್ತಾ ಇದ್ದೇವೆ. ನಮ್ಮ ಅಭ್ಯರ್ಥಿಗೆ ಆತ್ಮಸಾಕ್ಷಿ ಮತ ಕೇಳುತ್ತೇವೆ ಎಂದರು.
ಇದನ್ನೂ ಓದಿ: ಪಠ್ಯ ಪರಿಷ್ಕರಣೆ ದಲಿತ, ಮಹಿಳಾ, ಸಾಮಾಜಿಕ ನ್ಯಾಯ, ಸಮಾನತೆ ವಿರೋಧಿ ಕ್ರಮ: ಬರಗೂರು