ತುಮಕೂರು: ಮಹಾತ್ಮ ಗಾಂಧೀಜಿಯವರ 150 ನೇ ಜನ್ಮ ದಿನಾಚರಣೆ ಪ್ರಯುಕ್ತ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ನವೆಂಬರ್ 11 ರಿಂದ 2020ರ ಜನವರಿ 30 ರವರೆಗೆ ಗಾಂಧಿ ಸಂಕಲ್ಪ ಯಾತ್ರೆ ಆಯೋಜಿಸಲಾಗಿದೆ ಎಂದು ಸಂಸದ ಜಿ.ಎಸ್ ಬಸವರಾಜು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಾಂಧೀಜಿಯವರ 150 ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಅವರ ತತ್ವಾದರ್ಶಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಗಾಂಧಿ ಸಂಕಲ್ಪ ಯಾತ್ರೆಯನ್ನು ದೇಶದ ಎಲ್ಲಾ ಸಂಸದರ ಕ್ಷೇತ್ರದಲ್ಲಿ ಆಯೋಜಿಸಲಾಗಿದೆ. ಆ ಮೂಲಕ ಬಿಜೆಪಿ ಗಾಂಧಿವಾದಿ ತತ್ವಗಳ ನಿಜವಾದ ಪ್ರತಿಪಾದಕರು ಎಂದು ಜನತೆಗೆ ತಿಳಿಸುವ ಪ್ರಯತ್ನವಾಗಲಿದೆ ಎಂದರು.
ಗಾಂಧಿ ಸಂಕಲ್ಪ ಯಾತ್ರೆ ಯಶಸ್ವಿಯಾಗಿ ಕಾರ್ಯರೂಪಕ್ಕೆ ತರಲು ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಮಾಜಿ ಶಾಸಕರು ಸಾರ್ವಜನಿಕರೊಂದಿಗೆ 15 ದಿನಗಳ ಕಾಲ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಗಾಂಧೀಜಿಯವರ ಸ್ವದೇಶಿ, ಖಾದಿ, ಸ್ವಾವಲಂಬಿ, ಸ್ವಚ್ಛತಾ ತತ್ವಗಳನ್ನು ಪ್ರಚಾರ ಮಾಡಲಾಗುವುದು. ಪ್ರತಿ ವಿಧಾನಸಭೆಯ ವ್ಯಾಪ್ತಿಯಲ್ಲಿ ಸಂಕಲ್ಪ ಯಾತ್ರೆ ನಡೆಯಲಿದ್ದು, ನಿತ್ಯ 6 ರಿಂದ 8 ಗ್ರಾಮಗಳಲ್ಲಿ 5 ರಿಂದ 10 ಕಿಲೋ ಮೀಟರ್ ಪಾದಯಾತ್ರೆ ನಡೆಯಲಿದೆ. ಇದರಂತೆ 15 ದಿನಗಳಲ್ಲಿ 150 ಕಿಲೋ ಮೀಟರ್ ಪಾದಯಾತ್ರೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಗಾಂಧಿ ಭಾವಚಿತ್ರದೊಂದಿಗೆ ಗಾಂಧಿ ತತ್ವಗಳಿಗೆ ಪುನರ್ಜೀವ ನೀಡಲಾಗುತ್ತದೆ ಎಂದರು.