ತುಮಕೂರು: ಜಿಲ್ಲೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳು ಜಾರಿಯಲ್ಲಿವೆ. ಕಾಮಗಾರಿಯನ್ನು ಜನರ ಸಹಭಾಗಿತ್ವದೊಂದಿಗೆ ಅನುಷ್ಠಾನಗೊಳಿಸುವ ಭರವಸೆ ನೀಡಲಾಗಿತ್ತು. ಆದರೆ ಸಾರ್ವಜನಿಕರು ತಾವು ಕೊಟ್ಟ ಕೆಲವೊಂದು ಸಲಹೆಗಳನ್ನು ಸ್ವೀಕರಿಸುತ್ತಿಲ್ಲ ಎಂದು ಭಾರತೀಯ ಮೂಲದ ಅಮೆರಿಕಾ ನಿವಾಸಿ ಸೌರವ್ ಬಾಬು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ಒಂದೂವರೆ ವರ್ಷದಿಂದ ಸ್ಮಾರ್ಟ್ ಸಿಟಿ ಯೋಜನೆಯ ತಂಡದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಮೊದಲಿಗೆ ನಾವು ಯಾವುದೇ ಕಾರ್ಯವನ್ನು ಮಾಡುವ ಮೊದಲು ಮೂಲಭೂತ ಸೌಲಭ್ಯ ಸರಿಯಾಗಿದೆಯಾ ಎಂದು ಪರಿಶೀಲಿಸಬೇಕು ಎಂದು ತಂಡಕ್ಕೆ ನಾನು ಹೇಳಿಕೊಂಡು ಬರುತ್ತಿದ್ದೇನೆ. ಈಗಾಗಲೇ ಬೆಂಗಳೂರಿನಲ್ಲಿ ನಡೆಯುತ್ತಿರುವ ಕಾಮಗಾರಿಗಳಿಂದ ನೀರು ರಸ್ತೆಯಲ್ಲಿಯೇ ನಿಂತು ಸಾರ್ವಜನಿಕರಿಗೆ ತೊಂದರೆ ಆಗುವುದರ ಜೊತೆಗೆ ರಸ್ತೆಗಳು ಹಳ್ಳ ಹಿಡಿಯುತ್ತಿವೆ. ಹೀಗಾಗಿ ತುಮಕೂರಿನ ನಾಗರಿಕರು ಇಂತಹ ಸಮಸ್ಯೆಯನ್ನು ಎದುರಿಸಬಾರದು. ಮಳೆ ನೀರನ್ನು ನೇರವಾಗಿ ಒಳಚರಂಡಿ ತಲುಪಿಸಿದರೆ ರಸ್ತೆಗಳು ಹಾಳಾಗುವುದಿಲ್ಲ ಎಂದು ಸಲಹೆ ನೀಡಿದರು.
ಈಗಾಗಲೇ ವಿದೇಶಗಳಲ್ಲಿ ಯಾವ ರೀತಿ ರಸ್ತೆ ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ವಿಡಿಯೋ ಮೂಲಕ ನೀಡಿದ್ದೇನೆ. ಈಗ ಒಳಚರಂಡಿ ವ್ಯವಸ್ಥೆಗೆ ಬಳಸಲಾಗುತ್ತಿರುವ ಶೇ. 40ರಷ್ಟು ಹಣದಲ್ಲಿಯೇ ಈ ವ್ಯವಸ್ಥೆಯನ್ನೂ ನಿರ್ಮಾಣ ಮಾಡಬಹುದು. ಕೊಳಚೆ ನೀರು ಮತ್ತು ಮಳೆ ನೀರು ಯಾವುದೇ ಕಾರಣಕ್ಕೂ ಮಿಶ್ರಣವಾಗುವುದಿಲ್ಲ. ಈ ರೀತಿ ಅಭಿವೃದ್ಧಿಯಾದರೆ ಅಂತರ್ಜಲ, ಮಳೆ ನೀರು ಶೇಖರಣೆಯ ಜೊತೆಗೆ ರಸ್ತೆ ಬೇಗ ಹಾಳಾಗುವುದಿಲ್ಲ. ಜೊತೆಗೆ ಪರಿಸರ ಮಲಿನವಾಗುವುದನ್ನು ತಡೆಯಬಹುದು ಎಂದರು.
ರಾಜಕಾಲುವೆಗಳನ್ನು ನಿರ್ಮಿಸಿದ್ದಾರೆ. ಆ ವಾಸನೆಯಿಂದ ಮನುಷ್ಯರೇ ಬದುಕಲು ಸಾಧ್ಯವಾಗುತ್ತಿಲ್ಲ. ಇನ್ನು ಅದರಲ್ಲಿ ಜಲಚರಗಳು ಹೇಗೆ ವಾಸಿಸುತ್ತವೆ. ಅಲ್ಲದೆ ಅನೇಕ ಕ್ರಿಮಿಕೀಟಗಳು ಹೆಚ್ಚಾಗಿ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.