ತುಮಕೂರು: ಜಿಲ್ಲೆಯಲ್ಲಿ ರಾಜಕೀಯ ಪಕ್ಷಗಳ ಬೆಂಬಲಿತ ಅಭ್ಯರ್ಥಿ ಎಂಬ ಬ್ಯಾನರ್‌ಗಳು ಹಾಗೂ ಕಟ್ಟುಗಳು ಕಾಣಿಸುತ್ತಿಲ್ಲ. ಅಲ್ಲದೆ ರಾಜಕೀಯ ಪಕ್ಷಗಳು ಬಹಿರಂಗ ಪ್ರಚಾರದಲ್ಲಿ ಮಾಡುತ್ತಿಲ್ಲ. ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಮಾಜಿ ಹಾಗೂ ಹಾಲಿ ಶಾಸಕರು ತಮ್ಮ ಬೆಂಬಲಿತ ಅಭ್ಯರ್ಥಿಗಳ ಪರ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ ಚುನಾವಣೆಗೂ ಮೊದಲೇ ಬಿಜೆಪಿ ಮಾತ್ರ ಜಿಲ್ಲೆಯಲ್ಲಿ ಎರಡು ಕಡೆ ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಸಮಾವೇಶಗಳನ್ನು ನಡೆಸಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮಾತ್ರ ಈ ರೀತಿ ಬಹಿರಂಗ ಸಮಾವೇಶ ಕೂಡ ಮಾಡದೆ ಇರುವುದು ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ಬಹಿರಂಗವಾಗಿ ಗುರುತಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.
ಸ್ಥಳೀಯವಾಗಿ ಮಾಜಿ ಹಾಗೂ ಹಾಲಿ ಶಾಸಕರು ಪಕ್ಷದ ಮುಖಂಡರು ಗ್ರಾಮೀಣ ಪ್ರದೇಶದಲ್ಲಿ ಅಲ್ಲಲ್ಲಿ ಸಣ್ಣಪುಟ್ಟ ಸಭೆಗಳನ್ನು ಮಾಡಿ ಬಹಿರಂಗವಾಗಿ ಕಾಣಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಮಕೃಷ್ಣ ಅವರ ಪ್ರಕಾರ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಹಾಲಿ ಹಾಗೂ ಮಾಜಿ ಶಾಸಕರಿಗೆ ಮೌಖಿಕವಾಗಿ ಸಂದೇಶಗಳನ್ನು ನೀಡಲಾಗಿದೆ. ಅಲ್ಲದೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಿಗೆ ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಸಂದೇಶ ನೀಡಲಾಗಿದೆ.
ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮಗಳ ಹಿನ್ನೆಲೆಯಲ್ಲಿ ಬಹಿರಂಗ ಸಮಾವೇಶಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಪರಿಚಯಿಸಲು ಕೂಡ ಬಹಿರಂಗವಾಗಿ ಸಾಧ್ಯವಾಗದೆ ಇಕ್ಕಟ್ಟಿಗೆ ಸಿಲುಕುವಂತಾಗಿದೆ ಎನ್ನುತ್ತಾರೆ. ಇನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷ ಸುರೇಶ ಗೌಡ ಅವರ ಪ್ರಕಾರ, ಚುನಾವಣೆ ಘೋಷಣೆಗೂ ಮುನ್ನವೇ ಗ್ರಾಮಸ್ವರಾಜ್ ಹೆಸರಿನಲ್ಲಿ ರಾಜ್ಯ ಮಟ್ಟದಲ್ಲಿ ಬಿಜೆಪಿ ಮುಖಂಡರು ಈಗಾಗಲೇ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಲು ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದಾರೆ. ಎರಡು ಕಡೆ ಜಿಲ್ಲೆಯಲ್ಲಿ ಸಮಾವೇಶವನ್ನು ಕೂಡ ಮಾಡಲಾಗಿದೆ. ಶೇಕಡಾ 80ರಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಕಾರ್ಯತಂತ್ರ ರೂಪಿಸಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು, ಜೆಡಿಎಸ್ ಜಿಲ್ಲಾಧ್ಯಕ್ಷರ ಪ್ರಕಾರ ಈಗಾಗಲೇ ಜೆಡಿಎಸ್ ಶಾಸಕರು ಇರುವಂತಹ ಕ್ಷೇತ್ರಗಳಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಸ್ಥಳೀಯ ಶಾಸಕರು ರಣತಂತ್ರ ರೂಪಿಸಿದ್ದಾರೆ. ಅದೇ ರೀತಿ ಮಾಜಿ ಶಾಸಕರು ಕೂಡ ತಮ್ಮ ಕ್ಷೇತ್ರಗಳಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಕೆಲವೆಡೆ ವಿವಿಧ ಬೇಡಿಕೆಗಳು ಹಾಗೂ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಆಗ್ರಹಿಸಿ ಚುನಾವಣೆ ಬಹಿಷ್ಕಾರದಂತಹ ನಿರ್ಧಾರಕ್ಕೆ ಮತದಾರರು ಮುಂದಾಗಿದ್ದಾರೆ. ಜಿಲ್ಲಾಡಳಿತ ಸಹ ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಅವರ ಮನವೊಲಿಸುವಲ್ಲಿ ಮುಂದಾಗುತ್ತಿದೆ. ಅಲ್ಲದೆ ಸ್ಥಳೀಯ ಮೂರು ಪಕ್ಷಗಳ ನಾಯಕರು ಸಹ ಮತದಾನದಲ್ಲಿ ಭಾಗವಹಿಸುವಂತೆ ಮತದಾರರನ್ನು ಮನವೊಲಿಸುತ್ತಿದ್ದಾರೆ. ಒಟ್ಟಾರೆ ಕಟೌಟ್ ಬ್ಯಾನರ್ ಗಳ ಅಬ್ಬರದ ಪ್ರಚಾರವಿಲ್ಲದೆ ಗ್ರಾಮ ಪಂಚಾಯಿತಿ ಚುನಾವಣೆ ಪ್ರಕ್ರಿಯೆ ನಡೆಯುತ್ತಿದೆ ಎಂದರೆ ತಪ್ಪಾಗಲಾರದು.