ತುಮಕೂರು: ನಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುವುದಿಲ್ಲ ಎಂದು ತಪ್ಪಾಗಿ ತಿಳಿದುಕೊಂಡಿದ್ದೆವು. ಆದರೆ, ನಮ್ಮ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿ ಮಧ್ಯಂತರ ಪರಿಹಾರ ಬಿಡುಗಡೆಗೊಳಿಸಿದ್ದು ಮುಂದೆ ಹೆಚ್ಚಿನ ಪರಿಹಾರ ರಾಜ್ಯಕ್ಕೆ ಬಿಡುಗಡೆಯಾಗಲಿದೆ ಎಂಬ ಭರವಸೆಯಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ತಿಳಿಸಿದರು.
ಕೇಂದ್ರ ಸರ್ಕಾರದಿಂದ ಈಗ ಬಿಡುಗಡೆಯಾಗಿರುವ ಹಣವೇ ಅಂತಿಮವಲ್ಲ. ಮಧ್ಯಂತರ ಎಂದು ಸ್ಪಷ್ಟವಾಗಿ ಅವರೇ ತಿಳಿಸಿದ್ದಾರೆ. ಹೀಗಾಗಿ ಇದರ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲಾಗುವುದಿಲ್ಲ. ಮುಂದೆ ಹೆಚ್ಚಿನ ಪರಿಹಾರ ಬಿಡುಗಡೆಯಾಗಲಿದೆ ಎಂಬ ಭರವಸೆ ಇದೆ. ಈಗ ಬಿಡುಗಡೆಯಾದ ಪರಿಹಾರದಿಂದ ಕಾರ್ಯಕ್ರಮಗಳನ್ನು ರೂಪಿಸಲು ಶಕ್ತಿ ಬಂದಂತಾಗಿದ್ದು, ಜನರ ಕಷ್ಟ ಸುಖಕ್ಕೆ ನಾವು ಸ್ಪಂದಿಸುತ್ತೇವೆ ಎಂದರು.
ನೆರೆ ಪರಿಹಾರಕ್ಕೆ ರಾಜ್ಯ ಸರ್ಕಾರ 3 ಸಾವಿರ ಕೋಟಿಗೂ ಅಧಿಕ ಹಣ ಖರ್ಚು ಮಾಡಿದೆ. ಏನೇನು ಕಾರ್ಯಕ್ರಮ ಮಾಡಬೇಕು ಅದನ್ನು ಮಾಡಿದ್ದೇವೆ. ರಾಜಕೀಯ ಮಾಡುವುದಕ್ಕೋಸ್ಕರ ಯಾರೋ ಕೆಲವರು ಹಣ ಬಿಡುಗಡೆ ಮಾಡಿಲ್ಲ ಎಂದು ಕೆಲಸ ಮಾಡಿರುವುದನ್ನು ಪರಿವರ್ತನೆ ಮಾಡಿದ್ದಾರೆ. ಎಲ್ಲರಿಗೂ ಮನೆ ನಿರ್ಮಿಸಿಕೊಳ್ಳಲು 1 ಲಕ್ಷವನ್ನು ನೀಡಲಾಗಿದೆ. 10 ಸಾವಿರ ಹಣವನ್ನು ಖಾತೆಗೆ ಹಾಕಲಾಗಿದೆ. ತಾತ್ಕಾಲಿಕವಾಗಿ ಮನೆ ನಿರ್ಮಿಸಿ ಕೊಳ್ಳುವವರಿಗೆ 50 ಸಾವಿರ ಹಣ ನೀಡಲಾಗಿದೆ. ಈವರೆಗೂ 9,000 ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗಿದೆ. ಆದರೆ, ಜಿಲ್ಲಾಧಿಕಾರಿಗಳಿಗೆ ಸಂತ್ರಸ್ತರು ದಾಖಲೆ ನೀಡುತ್ತಿಲ್ಲ ಎಂದರು.
ಶಾಸಕ ಎಸ್.ಆರ್ ಶ್ರೀನಿವಾಸ್ ಅವರು ಬಿಜೆಪಿ ಸಂಸದರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಮಾಧುಸ್ವಾಮಿ, ನನ್ನ ಬಾಯಿಯಿಂದ ಬರುವ ಮಾತು ನನ್ನ ಸಂಸ್ಕೃತಿಯನ್ನು ತೋರಿಸುತ್ತದೆ. ಯಾವ ಕುಲ ಎಂಬುದನ್ನು ಅವರ ನಾಲಿಗೆಯೇ ತಿಳಿಸುತ್ತದೆ ಎಂದರು.
ಇನ್ನು, ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಭೂಬಾಲನ್ ಅವರ ವರ್ಗಾವಣೆಗೂ ನನಗೂ ಯಾವುದೇ ಸಂಬಂಧವಿಲ್ಲ. ಅವರ ವರ್ಗಾವಣೆಯ ಬಗ್ಗೆ ನಾನು ಎಲ್ಲಿಯಾದರೂ ಮಾತನಾಡಿದ್ದೇನೆಯೇ. ತುಮಕೂರಿನ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಭೂಬಾಲನ್ ವರ್ಗಾವಣೆ ಆಗಿರುವ ಬಗ್ಗೆ ತಿಳಿಸಿದ ತಕ್ಷಣ ನಾನು ಸಿ.ಎಂ ಅವರನ್ನು ಭೇಟಿಯಾಗಿ ತುಮಕೂರಿಗೆ ವರ್ಗಾವಣೆ ಮಾಡಲು ಕೇಳಿಕೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದರು.