ತುಮಕೂರು: ತುಮಕೂರು: ಕಳೆದ ವಾರ ಕಾಣೆಯಾಗಿದ್ದ 'ರುಸ್ತುಮಾ' ಹೆಸರಿನ ಮುದ್ದಿನ ಗಿಳಿ ತುಮಕೂರಿನ ಬಂಡೆಪಾಳ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಗಿಳಿ ಹುಡುಕಿ ಕೊಟ್ಟವರಿಗೆ ಮಾಲೀಕ ಅರ್ಜುನ್ ಅವರು ಬರೋಬ್ಬರಿ 85 ಸಾವಿರ ರೂಪಾಯಿ ಬಹುಮಾನ ನೀಡುವ ಮೂಲಕ ತಾವು ಘೋಷಿಸಿದಂತೆ ನಡೆದುಕೊಂಡಿದ್ದಾರೆ. ಅಲ್ಲದೆ, ಗಿಳಿಯ ಮೇಲೆ ಅವರಿಗಿರುವ ಪ್ರೀತಿ, ಕಾಳಜಿ ಎಂತಹದ್ದು ಎಂಬುದನ್ನು ಸಾಬೀತುಪಡಿಸಿದ್ದಾರೆ.
ಕಳೆದ ಶನಿವಾರ(ಜುಲೈ 16) ತುಮಕೂರಿನ ಜಯನಗರದ ನಿವಾಸಿ ಅರ್ಜುನ್ ಎಂಬುವರ ಆಫ್ರಿಕನ್ ಗ್ರೇ ತಳಿಯ ಗಿಳಿ ಕಾಣೆಯಾಗಿತ್ತು. ಮುದ್ದಿನ ಗಿಳಿ ಹುಡುಕಿಕೊಟ್ಟವರಿಗೆ 50,000 ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಅಲ್ಲದೇ ತಾವು ಸಹ ಗಿಳಿಗಾಗಿ ಹುಡುಕಾಟ ನಡೆಸಿದ್ದರು.
ಗಿಳಿ ಸಿಕ್ಕಿದ್ದು ಹೀಗೆ: ತುಮಕೂರಿನ ಬಂಡೆಪಾಳ್ಯ ಗ್ರಾಮದ ಶ್ರೀನಿವಾಸ್ ಎಂಬುವರು ತಮ್ಮ ಮನೆ ಮುಂದೆ ಕೂತಿದ್ದ ಈ ಅಪರೂಪದ ಗಿಳಿಯನ್ನು ಸಂರಕ್ಷಿಸಿಟ್ಟಿದ್ದರು. ಬಳಿಕ ಗಿಳಿಯೊಂದು ಕಾಣೆಯಾದ ಸುದ್ದಿ ಬಗ್ಗೆ ಅವರಿಗೆ ಮಾಹಿತಿ ಸಿಕ್ಕಿದೆ. ಗಿಳಿಯ ಮಾಲೀಕ ಈ ಬಗ್ಗೆ ಪ್ರಚಾರ ಮಾಡಿದ್ದಲ್ಲದೆ, ಮಾಧ್ಯಮಗಳಲ್ಲಿಯೂ ಸುದ್ದಿ ಬಿತ್ತರವಾಗಿದ್ದರ ಕುರಿತು ಅಕ್ಕಪಕ್ಕದ ಮನೆಯವರು ಶ್ರೀನಿವಾಸ್ಗೆ ತಿಳಿಸಿದ್ದಾರೆ. ನಂತರ ಅವರು ಅರ್ಜುನ್ ಮೊಬೈಲ್ ನಂಬರ್ಗೆ ಕರೆ ಮಾಡಿ ಸಂಪರ್ಕಿಸಿ ಗಿಣಿಯನ್ನು ವಾಪಸ್ ಕೊಟ್ಟಿದ್ದಾರೆ.
ಪ್ರೀತಿಯಿಂದ ಸಾಕಿದ ಗಿಳಿ ಮರಳಿ ಗೂಡು ಸೇರುತ್ತಿದ್ದಂತೆ ಮಾಲೀಕ ಅರ್ಜುನ್, 85,000 ರೂಪಾಯಿ ಬಹುಮಾನ ನೀಡಿದ್ದಾರೆ. ಮೊದಲು 50 ಸಾವಿರ ರೂಪಾಯಿ ನೀಡಲಾಗುವುದು ಎಂದು ತಿಳಿಸಲಾಗಿದ್ದರೂ ಸಂತಸದಿಂದ ಮೊತ್ತವನ್ನು ಹೆಚ್ಚಿಸಿದ್ದಾರೆ. ಅಷ್ಟೇ ಅಲ್ಲದೇ, ರುಸ್ತುಮಾ ಮರಳಿ ಗೂಡು ಸೇರಿರುವುದಕ್ಕೆ ಮನೆಯಲ್ಲಿ ಸಂಭ್ರಮ ಮನೆಮಾಡಿದೆ.
ಕರಪತ್ರ ಹಂಚಿಕೆ: ಗಿಳಿಯ ನಾಪತ್ತೆಯಾದಾಗ ಮಾಹಿತಿ ನೀಡುವಂತೆ 35 ಸಾವಿರ ಕರಪತ್ರಗಳನ್ನು ಹಂಚಿದ್ದರು. ಬಳಿಕ ನಾಪತ್ತೆಯಾಗಿದ್ದ ಗಿಣಿ ಜೊತೆಯಲ್ಲಿದ್ದ ಮತ್ತೊಂದು ಗಿಳಿಯನ್ನೂ ಇಟ್ಟುಕೊಂಡು ನಗರದೆಲ್ಲೆಡೆ ಓಡಾಡಿದ್ದರು. ಈ ಗಿಣಿಯ ಸದ್ದಿಗೆ ಆ ಗಿಳಿ ಬರಬಹುದು ಎಂಬುದು ಇವರ ನಂಬಿಕೆಯಾಗಿತ್ತು.
ಅಲ್ಲದೆ, ಗಿಳಿ ಸಿಕ್ಕಿದ ಮೇಲೆ ಅದನ್ನು ಗುಜರಾತ್ನ ಪಾರ್ಕೊಂದರಲ್ಲಿ ಬಿಡಲಾಗುವುದು. ಸಿಗದೇ ಇದ್ದರೂ ಜೊತೆಗಿರುವ ಒಂದು ಗಿಳಿಯನ್ನು ನಾವು ಅಲ್ಲಿಗೆ ಕೊಡುತ್ತೇವೆ. ಮತ್ತೊಮ್ಮೆ ಈ ರೀತಿಯ ಸಮಸ್ಯೆ ಸಂಭವಿಸಬಾರದೆನ್ನುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಮಾಲೀಕ ಅರ್ಜುನ್ ಹೇಳಿದ್ದರು.
ಇದನ್ನೂ ಓದಿ: ನಾಪತ್ತೆಯಾದ ಮುದ್ದಿನ ಗಿಣಿ ಪತ್ತೆಗೆ ಮತ್ತೊಂದು ಗಿಣಿಯ ಮೊರೆ ಹೋದ ಮಾಲೀಕ