ತುಮಕೂರು: ಲೋಕಸಭೆ ಚುನಾವಣೆ ಹಿನ್ನೆಲೆ ರಾಜಕಾರಣಿಗಳ ನಡುವೆ ವಾಕ್ಸಮರ ಏರುತ್ತಲೇ ಇದೆ. ಸಣ್ಣ ಕೈಗಾರಿಕೆ ಸಚಿವ ಶ್ರೀನಿವಾಸ್, ಪ್ರಧಾನಿ ಮೋದಿ ಹಾಗೂ ತುಮಕೂರಿನ ಮಾಜಿ ಸಂಸದ ಜಿ.ಎಸ್. ಬಸವರಾಜು ವಿರುದ್ಧ ಏಕವಚನದಲ್ಲಿ ಕಿಡಿ ಕಾರಿದ್ದಾರೆ.
ತುಮಕೂರಿನ ಗೂಳೂರಿನಲ್ಲಿ ನಡೆದ ಕಾಂಗ್ರೆಸ್-ಜೆಡಿಎಸ್ ಜಂಟಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಭಸ್ಮಾಸುರನಂತೆ. ಆತ ಕಾಲಿಟ್ಟಲೆಲ್ಲ ಜನರು ಭಸ್ಮವಾಗುತ್ತಿದ್ದಾರೆ. ಅದೆಷ್ಟೋ ಮಂದಿಯನ್ನು ಮುಳುಗಿಸಿದ ಬಸವರಾಜು, ಮಾಜಿ ಸಚಿವ ಸೊಗಡು ಶಿವಣ್ಣರನ್ನ ಮೂಲೆಗುಂಪು ಮಾಡಿದ ಎಂದು ಆರೋಪಿಸಿದ್ದಾರೆ.
ಜಿಲ್ಲೆಯಲ್ಲಿ ಅತಿಹೆಚ್ಚು ಸುಳ್ಳು ಹೇಳುವರಾರಾದರೂ ಇದ್ದರೆ, ಅದು ಬಸವರಾಜು. ದೇವೆಗೌಡರ ಬಗ್ಗೆ ಇಲ್ಲಸಲ್ಲದ ಮಾತನಾಡುತ್ತಾನೆ. ಎಸ್.ಎಂ. ಕೃಷ್ಣ ಕಾಲದಲ್ಲಿ ನೇತ್ರಾವತಿ ನದಿ ತಿರುಗಿಸ್ತೀನಿ ಅಂತಿದ್ದ. ಆದರೆ ಎಲ್ಲಿಯೂ ತಿರುಗಿಸಲಿಲ್ಲ. ಜನರ ದುಡ್ಡಲ್ಲೇ ಎಂಜಿನಿಯರಿಂಗ್ ಕಾಲೇಜು ಕಟ್ಟಿ ಐಷಾರಾಮಿ ಜೀವನ ನಡೆಸುತ್ತಿದ್ದೀಯಲ್ಲಾ, ರಾಗಿ ಬೆಳೆದ ದುಡ್ಡಲ್ಲಿ ಕಾಲೇಜು ಕಟ್ಟಿದ್ಯಾ? ಎಂದು ಬಿರುನುಡಿಗಳಿಂದ ನಿಂದಿಸಿದರು.
ಕರ್ನಾಟಕದಿಂದ ಪ್ರಧಾನಿ ಹುದ್ದೆಗೇರಿದ ನಿಜವಾದ ಮಣ್ಣಿನ ಮಗ ದೇವೆಗೌಡರಿಗೆ ನೀನು ಗೌರವ ನೀಡುವುದೇ ಆಗಿದ್ದರೆ ಚುನಾವಣೆಗೆ ನಿಲ್ಲಬಾರದಿತ್ತು. ನಾಚಿಕೆ, ಮಾನ, ಮರ್ಯಾದೆ ಇಲ್ಲ ಎಂದು ಛೇಡಿಸಿದರು.
ಪ್ರಧಾನಿ ಮೋದಿ ವಿರುದ್ದವೂ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಅವರು, ಎರಡು ಕೋಟಿಯಷ್ಟು ಉದ್ಯೋಗ ಕೊಡ್ತಿನಿ ಅಂದಾ, ಅವನು ಕೊಟ್ನಾ? ರೈತರ ಸಾಲ ಮನ್ನಾ ಮಾಡಿದ್ನಾ? ಮೋದಿ ಎಂಥಾ ಮನೆಹಾಳ ಗೊತ್ತಾ ಎಂದರು.
ಮೋದಿ ಕ್ಯಾಬಿನೆಟ್ನಲ್ಲಿ ಇರುವವರು ತಿಕ್ಕಲರು. ಒಬ್ಬೊಬ್ಬರು ಒಂದೊಂದು ರೀತಿ ಹೇಳಿಕೆ ಕೊಡ್ತಾರೆ. ಸಂವಿಧಾನ ಬದಲಿಸುತ್ತೇನೆ ಎಂದು ಹೇಳುವ ತಿಕ್ಕಲರು ಇದ್ದಾರೆ ಎಂದು ಮಾತಿನಲ್ಲಿ ಚುಚ್ಚಿದರು.