ತುಮಕೂರು: ಜಿಲ್ಲೆಯಲ್ಲಿ ಹಾಲಿ ಮತ್ತು ಮಾಜಿ ಸಚಿವರ ನಡುವಿನ ಫೈಟ್ ಜೋರಾಗಿದೆ. ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೇಳೆ ತಾರತಮ್ಯ ನೀತಿ ಅನುಸರಿಸಿದ್ದರು ಎಂದು ಹಾಲಿ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಆರೋಪಿಸಿದ್ದಾರೆ.
ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಮೇಶ್ವರ್ ಅವರ ಅಧಿಕಾರಾವಧಿಯಲ್ಲಿ ಮಧುಗಿರಿ ಮತ್ತು ಕೊರಟಗೆರೆಗೆ ಮಾತ್ರ 110 ವಿವಿಧ ಭವನಗಳನ್ನ ಮಂಜೂರು ಮಾಡಿದ್ದರು. ಚಿಕ್ಕನಾಯಕನಹಳ್ಳಿಗೆ 2 ಭವನಗಳನ್ನು ಮಾತ್ರ ಮಂಜೂರು ಮಾಡಿಕೊಟ್ಟಿದ್ದರು. ಇದು ತಾರತಮ್ಯ ಅಲ್ಲದೇ ಮತ್ತೇನು ಎಂದು ಪ್ರಶ್ನಿಸಿದರು.
ದ್ವೇಷ, ತಾರತಮ್ಯದ ರಾಜಕಾರಣ ಮಾಡಬಾರದು. ನಮಗೆ ಇಡೀ ಜಿಲ್ಲೆಯ ಅಭಿವೃದ್ದಿ ಮುಖ್ಯ. ಅವರು ಮಾಡಿದಂತೆ ನಾವು ಮಾಡಲ್ಲ. ಅಂತಹ ಪಾಪದ ಕೆಲಸವನ್ನು ನಾವು ಮಾಡಿಲ್ಲ, ಮಾಡೋದೂ ಇಲ್ಲ ಎಂದು ಮಾಧುಸ್ವಾಮಿ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಸರ್ಕಾರ ಇದ್ದಾಗ ಅವರ ಕ್ಷೇತ್ರಕ್ಕೆ ಮಾತ್ರ ಇಚ್ಛಾನುಸಾರ ಅನುದಾನ ಮಂಜೂರು ಮಾಡಿಕೊಂಡಿದ್ದರು. ಬೇರೆ ಕ್ಷೇತ್ರಗಳಿಗೂ ಇದೇ ರೀತಿ ಅನುದಾನ ನೀಡಬೇಕಿತ್ತು. ಬಿಜೆಪಿ ಸರ್ಕಾರದಲ್ಲಿ ಎಲ್ಲಾ ಕಡೆ ಅನುದಾನ ಸಮರ್ಪಕವಾಗಿ ಹಂಚುವ ವಾತಾವರಣ ಸೃಷ್ಟಿ ಮಾಡಿದ್ದೇವೆ ಎಂದು ಸಚಿವರು ಹೇಳಿದರು.