ತುಮಕೂರು : ಮಾಜಿ ಸಚಿವ ದಿವಂಗತ ಸಿ.ಚನ್ನಿಗಪ್ಪರ ಮಕ್ಕಳು ಹಾಗೂ ಜೆಡಿಎಸ್ ಶಾಸಕ ಡಿ.ಸಿ.ಗೌರಿಶಂಕರ್ ಅಣ್ಣ ತಮ್ಮರಿಬ್ಬರು ಕಾಂಗ್ರೆಸ್ ನಿಂದ ರಾಜಕೀಯ ಪದಾರ್ಪಣೆ ಮಾಡಲು ಮುಂದಾಗಿದ್ದಾರೆ.
ಕೊರಟಗೆರೆ ವಿಧಾನಸಭಾ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಚುನಾಣೆಯ ಮೂಲಕ ರಾಜಕೀಯ ಪ್ರವೇಶಕ್ಕೆ ಮುನ್ಸೂಚನೆ ನೀಡಿದ್ದಾರೆ. ಕಾಂಗ್ರೆಸ್ ಸೇರುವುದಾಗಿ ಡಿ.ಸಿ. ಅರುಣ್ ಕುಮಾರ್ ಅಧಿಕೃತ ಘೋಷಣೆ ಮಾಡಿದ್ದಾರೆ. ಅರುಣ್ ಅವರು ಮಾಜಿ ಸಚಿವ ಚನ್ನಿಗಪ್ಪನ ಹಿರಿಯ ಮಗನಾಗಿದ್ದು, ಜೆಡಿಎಸ್ ಶಾಸಕ ಡಿ.ಸಿ.ಗೌರಿಶಂಕರ್ ಅಣ್ಣನಾಗಿದ್ದಾರೆ.
ಬೈಚೇನಹಳ್ಳಿ ಗ್ರಾಮದಲ್ಲಿ ಬೆಂಬಲಿಗರೊಂದಿಗೆ ಸಭೆ
ಕೊರಟಗೆರೆ ತಾಲೂಕು ಬೈಚೇನಹಳ್ಳಿ ಗ್ರಾಮದ ಆಂಜನೇಯ ಸ್ವಾಮಿ ದೇಗುಲದಲ್ಲಿ ಸೋಮವಾರ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿ ಮಾತನಾಡಿದ ಅರುಣ್ ಕುಮಾರ್, ಮುಂದಿನ ಚುನಾವಣೆಯಲ್ಲಿ ಜಿ. ಪರಮೇಶ್ವರ್ ಗೆಲುವಿಗಾಗಿ ಶ್ರಮಿಸುವೆ. ಅಲ್ಲದೇ, ಎಂಎಲ್‌ಸಿ ಚುನಾವಣೆಯಲ್ಲಿ ಆರ್.ರಾಜೇಂದ್ರ ಅವರಿಗೆ ಸಂಪೂರ್ಣ ಬೆಂಬಲ ನೀಡುವೆ. ನಾನು ನನ್ನ ತಮ್ಮ ವೇಣುಗೋಪಾಲ್ ಕಾಂಗ್ರೆಸ್ನಲ್ಲಿಯೇ ಇರುತ್ತೇವೆ ಎಂದು ಹೇಳಿದ್ದಾರೆ. ಸದ್ಯ ಅರುಣ್ ಕುಮಾರ್ ಹೇಳಿಕೆಯಿಂದ ಕೊರಟಗೆರೆ ಜೆಡಿಎಸ್ನಲ್ಲೂ ತಲ್ಲಣ ಉಂಟಾಗಿದೆ.