ತುಮಕೂರು: ಜಿಲ್ಲಾ ವ್ಯಾಪ್ತಿಯಲ್ಲಿ ಹಾದು ಹೋಗಿರುವ 3 ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾತ್ರಿ ಸಮಯದಲ್ಲಿ ಗೂಡ್ಸ್ ಲಾರಿಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವ ಕಾರಣ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ.
ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಒಂದು ವರ್ಷದಲ್ಲಿ 10 ಅಪಘಾತ ಸಂಭವಿಸಿದ್ದು, ಅದರಲ್ಲಿ 9 ಮಂದಿ ಮೃತಪಟ್ಟಿದ್ದರೆ 14 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಳ್ಳಂಬೆಳ್ಳ ಠಾಣೆ ವ್ಯಾಪ್ತಿಯಲ್ಲಿ ನಾಲ್ವರು, ತಾವರೆಕೆರೆ ಮತ್ತು ಕೋರ ಠಾಣಾ ವ್ಯಾಪ್ತಿಯಲ್ಲಿ ತಲಾ ಇಬ್ಬರು, ತುಮಕೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಓರ್ವ ಮೃತಪಟ್ಟಿದ್ದಾನೆ.
ಇದನ್ನೂ ಓದಿ...ಮುಂಬೈ ಸಿಲಿಂಡರ್ ಸ್ಫೋಟ ಪ್ರಕರಣ: 10ಕ್ಕೆ ತಲುಪಿದ ಮೃತರ ಸಂಖ್ಯೆ
ರಾಷ್ಟ್ರೀಯ ಹೆದ್ದಾರಿ-206ರಲ್ಲಿ 2 ಅಪಘಾತಗಳು ವರದಿಯಾಗಿದ್ದು, ಮೂವರು ಮೃತಪಟ್ಟು, ಏಳು ಮಂದಿ ಗಾಯಗೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ-234ರಲ್ಲಿ ಎರಡು ಪ್ರಕರಣಗಳು ಸಂಭವಿಸಿವೆ. ರಾಜ್ಯ ಹೆದ್ದಾರಿ-33ರಲ್ಲಿ ನಡೆದ 4 ಅಪಘಾತಗಳಲ್ಲಿ ನಾಲ್ವರು ಮೃತಪಟ್ಟರೆ, ಓರ್ವ ಗಾಯಗೊಂಡಿದ್ದಾನೆ. ರಾಜ್ಯ ಹೆದ್ದಾರಿಯ-3ರಲ್ಲಿ 6 ಪ್ರಕರಣಗಳು ನಡೆದಿವೆ. ಹತ್ತು ಮಂದಿ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪಾರ್ಕಿಂಗ್ ಮಾಡಿರುವಂತಹ ಲಾರಿ, ಟ್ರಕ್ಗಳಿಗೆ ಡಿಕ್ಕಿ ಹೊಡೆದು ವಾಹನ ಸವಾರರು ಮೃತಪಡುತ್ತಿದ್ದಾರೆ. ಅದರ ತಡೆಗೆ ಜಿಲ್ಲಾ ಪೊಲೀಸರು ಹೆದ್ದಾರಿಗಳಲ್ಲಿ ಪ್ಯಾಟ್ರೋಲಿಂಗ್ ಮಾಡಬೇಕಿದೆ. ರಾತ್ರಿ ಸಮಯದಲ್ಲಿ ಟ್ರಕ್ಗಳನ್ನು ನಿಲ್ಲಿಸಲು ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆಯನ್ನು ರಾಷ್ಟ್ರೀಯ ಹೆದ್ಧಾರಿ ಪ್ರಾಧಿಕಾರ ಮಾಡಬೇಕಿದೆ. ಈ ಮೂಲಕ ಇಂತಹ ಅಪಘಾತ ಪ್ರಕರಣಗಳಿಗೆ ಕಡಿವಾಣ ಹಾಕಬಹುದು.