ತುಮಕೂರು : ನಾನು ಈವರೆಗೂ ಗೋ ಮಾಂಸ ತಿಂದಿಲ್ಲ. ತಿನ್ನಬೇಕು ಎಂದರೆ ನಾನು ತಿಂದೇ ತಿನ್ನುತ್ತೇನೆ. ಆದರೆ, ನಾನು ಏನು ತಿನ್ನಬೇಕು ಎಂಬುದು ನನಗೆ ಬಿಟ್ಟದ್ದು. ಕೇವಲ ಮುಸ್ಲಿಂಮರು ಮಾತ್ರ ಗೋಮಾಂಸ ತಿನ್ನುವುದಲ್ಲ, ಹಿಂದೂಗಳೂ, ಕ್ರಿಶ್ಚಿಯನ್ನರೂ ತಿನ್ನುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತುಮಕೂರಿನಲ್ಲಿ ಮಾತನಾಡಿದ ಅವರು, ಮುಸಲ್ಮಾನರು ಒಬ್ಬರೇ ಗೋಮಾಂಸ ತಿನ್ನುವುದಿಲ್ಲ. ಬದಲಾಗಿ ಹಿಂದೂಗಳು ಕೂಡ ಗೋಮಾಂಸ ತಿನ್ನುತ್ತಾರೆ. ಅವರವರ ಆಹಾರ ಪದ್ಧತಿ ಅದು. ನಮ್ಮ ದೇಶದಲ್ಲಿ 1964ರಿಂದಲೇ ಗೋಹತ್ಯೆ ನಿಷೇಧ ಕಾಯ್ದೆ ಇದೆ. ಅದನ್ನು ತಿದ್ದುಪಡಿ ಮಾಡಿ ಕಾನೂನು ತಂದರು.
ಆದರೆ, ನಾನು ಮುಖ್ಯ ಮಂತ್ರಿಯಾಗಿದ್ದಾಗ ಮತ್ತೆ ಹಳೆ ಕಾನೂನು ಜಾರಿ ಮಾಡಿದೆ. ಮತ್ತೆ ಬಿಜೆಪಿ ಬಂದು ಬದಲಾವಣೆ ತಂದರು. ಆಗ ವಿಧಾನಸಭೆಯಲ್ಲಿ ಹೇಳಿದ್ದೆ, ಆಹಾರ ಪದ್ಧತಿಯ ಬಗ್ಗೆ ಕಾನೂನು ಮಾಡುವುದು ಸರಿಯಲ್ಲ ಎಂದು. ಅಲ್ಲದೇ ನಾನು ಹಿಂದೂ. ನನಗೆ ಗೋ ಮಾಂಸ ತಿನ್ನಬೇಕು ಅನಿಸಿದರೆ ನಾನು ತಿನ್ನುತ್ತೇನೆ, ಅದು ನನ್ನ ಹಕ್ಕು ಎಂದೂ ಹೇಳಿದ್ದೆ ಎಂದರು.
ಜಾತಿ-ಜಾತಿಗಳ ನಡುವೆ ಕಂದಕ ಸೃಷ್ಟಿಸುತ್ತಿರುವ ಬಿಜೆಪಿ ಹಾಗೂ ಸಂಘ ಪರಿವಾರದ ನಡೆ ಸರಿಯಲ್ಲ ಎಂದು ಗುಡುಗಿದರು. ಗೋಹತ್ಯೆ ನಿಷೇಧ ಕಾಯ್ದೆ ಈಗಾಗಲೇ ಜಾರಿಯಲ್ಲಿದೆ. ಕೇವಲ ಮುಸಲ್ಮಾನರನ್ನು ಗಮನದಲ್ಲಿಟ್ಟುಕೊಂಡು ಅದನ್ನು ತಿದ್ದುಪಡಿ ಮಾಡಲು ಹೋಗಬೇಡಿ ಎಂದು ನಾನು ವಿಧಾನಸಭೆಯಲ್ಲಿ ಆಗ್ರಹಿಸಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ: ಸಿದ್ದರಾಮಯ್ಯಗೆ ನ್ಯಾಯಾಲಯದಿಂದ ಸಮನ್ಸ್.. ವಿಚಾರಣೆಗೆ ಹಾಜರಾಗಲು ಸೂಚನೆ