ತುಮಕೂರು: ಮದಲೂರು ಕೆರೆಗೆ ನೀರು ಹರಿಸುವ ಕುರಿತು ನೀಡಿದ್ದ ಭರವಸೆ ಪೂರೈಸಲು ಬಿಜೆಪಿ ಮುಂದಾಗಿದ್ದು, ಮೊದಲ ಹಂತವಾಗಿ ಶಿರಾ ತಾಲೂಕಿನ ಕಳ್ಳಂಬೆಳ್ಳ ಕೆರೆಯಲ್ಲಿ ಸಂಗ್ರಹವಾಗಿರುವ ಹೇಮಾವತಿ ನೀರನ್ನು ನಾಲೆಗಳ ಮೂಲಕ ಮದಲೂರು ಕೆರೆಯತ್ತ ಹರಿಸಲು ಚಾಲನೆ ನೀಡಲಾಯಿತು.
ಇಂದು ಶಿರಾ ಶಾಸಕ ರಾಜೇಶ್ ಗೌಡ, ನಂಜಾವಧೂತ ಸ್ವಾಮೀಜಿ ಹಾಗೂ ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ ಸಮ್ಮುಖದಲ್ಲಿ ಗಂಗಾ ಪೂಜೆ ನೆರವೇರಿಸುವ ಮೂಲಕ ಮದಲೂರು ಕೆರೆಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಮದಲೂರು ಕೆರೆಗೆ ಹೇಮಾವತಿ ನದಿಯಿಂದ ನೀರು ಹರಿಸಬೇಕೆಂಬುದು ಶಿರಾ ಜನತೆಯ 40 ವರ್ಷಗಳ ಬೇಡಿಕೆಯಾಗಿತ್ತು. ಶಿರಾ ಚುನಾವಣೆ ಸಮಯದಲ್ಲಿ ಕೆರೆಗೆ ನೀರು ಹರಿಸುವ ವಿಚಾರ ಭಾರೀ ಸದ್ದು ಮಾಡಿತ್ತು.
ಈ ವೇಳೆ ಖುದ್ದು ಸಿಎಂ ಯಡಿಯೂರಪ್ಪ ಮದಲೂರಿಗೆ ಆಗಮಿಸಿ ಚುನಾವಣೆಯಾದ 6 ತಿಂಗಳಲ್ಲೇ ನೀರು ಹರಿಸುತ್ತೇವೆ ಎಂಬ ಭರವಸೆ ನೀಡಿದ್ದರು. ಯಡಿಯೂರಪ್ಪ ಭರವಸೆ ಮೇರೆಗೆ ಅತ್ಯಧಿಕ ಮತಗಳಿಂದ ವಿಜಯ ಸಾಧಿಸಿರುವ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಮದಲೂರು ಕೆರೆಗೆ ನೀರು ಹರಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ.
2008ರ ಧರಂಸಿಂಗ್ ಸರ್ಕಾರದ ಅವಧಿಯಲ್ಲಿ ತುಮಕೂರಿನ ನಾಲೆಯಿಂದ ಹೇಮಾವತಿ ನೀರನ್ನು ಶಿರಾ ನಗರಕ್ಕೆ ಹರಿಸಲಾಗಿತ್ತು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ರಾಜ್ಯ ಮತ್ತು ಕೇಂದ್ರ ಸರ್ಕಾರದ 67 ಕೋಟಿ ಅನುದಾನದಲ್ಲಿ ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆಗೆ ನೀರು ಹರಿಸಲು 35 ಕಿ.ಮೀ. ನಾಲಾ ಕಾಮಗಾರಿಗೆ ಚಾಲನೆ ನೀಡಿದ್ದರು.
ನಾಲಾ ಕಾಮಗಾರಿ ಪೂರ್ಣಗೊಂಡು 2015ರಲ್ಲಿ ಪ್ರಾಯೋಗಿಕವಾಗಿ ಹನ್ನೆರಡು ದಿನ ನೀರು ಹರಿಸಲಾಗಿತ್ತು. ಇದೀಗ ಉಪಚುನಾವಣೆಯಲ್ಲಿ ಬಿಜೆಪಿ ನೀಡಿದ್ದ ಭರವಸೆಯಂತೆ ಮದಲೂರು ಕೆರೆಗೆ ನೀರು ಹರಿಸಲು ಚಾಲನೆ ನೀಡಿರುವುದು ಜನರಿಗೆ ಸಂತಸ ತಂದಿದೆ.