ತುಮಕೂರು : ಉಕ್ರೇನ್ನಿಂದ ವೈದ್ಯಕೀಯ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಬಂದಿರುವ ವಿದ್ಯಾರ್ಥಿಗಳಿಗೆ ಭಾರತದಲ್ಲಿ ತಮ್ಮ ಶಿಕ್ಷಣ ಮುಂದುವರೆಸಲು ಕೇಂದ್ರ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆಗ್ರಹಿಸಿದ್ದಾರೆ.
ಉಕ್ರೇನ್ನಿಂದ ತುಮಕೂರಿಗೆ ಹಿಂತಿರುಗಿರುವ ದೀಕ್ಷಾ ಎಂಬ ವಿದ್ಯಾರ್ಥಿನಿಯ ಯೋಗಕ್ಷೇಮ ವಿಚಾರಿಸಿದ ಶಿವಣ್ಣ, ಮುಂದಿನ ದಿನಗಳಲ್ಲಿ ಪ್ರಭಾಕರ್ ಕೋರೆ ಅವರ ಸಲಹೆಯಂತೆ ಡೀಮ್ಡ್ ವಿವಿಗಳಲ್ಲಿ ಇಂತಹ ವಿದ್ಯಾರ್ಥಿಗಳಿಗೆ ಮೆಡಿಕಲ್ ವ್ಯಾಸಂಗ ಮುಂದುವರೆಸಲು ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಬೇಕು.
ಅಲ್ಲದೆ ಪ್ರಧಾನಿ ಮೋದಿ ಅವರು ಸಹ ಗಮನಹರಿಸಬೇಕು ಎಂದು ಮನವಿ ಮಾಡಿದರು. ಸೊಗಡು ಶಿವಣ್ಣ ಅವರೊಂದಿಗೆ ಮಾತನಾಡಿದ ದೀಕ್ಷಾ, ನಾನು ಜನರಲ್ ಕೆಟಗರಿಯಾಗಿರುವುದರಿಂದ ಪಿಯುಸಿಯಲ್ಲಿ ಉತ್ತಮ ಅಂಕ ಇದ್ದರೂ, ಮೆಡಿಕಲ್ ಕೋರ್ಸ್ ಮಾಡಲು ಅವಕಾಶ ದೊರೆಯಲಿಲ್ಲ. ಹಾಗಾಗಿ, ಉಕ್ರೇನ್ಗೆ ಹೋಗಬೇಕಾಗಿತ್ತು ಎಂದು ತಿಳಿಸಿದರು.