ತುಮಕೂರು: ಜೆಡಿಎಸ್ ಶಾಸಕ ಬಿ. ಸತ್ಯನಾರಾಯಣ್ ಅವರ ಅಂತ್ಯಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಶಿರಾ ತಾಲೂಕಿನ ಭುವನಹಳ್ಳಿಯಲ್ಲಿ ನೆರವೇರಿಸಲಾಯಿತು.
ಸತ್ಯನಾರಾಯಣ್ ಅವರ ಮಗ ಪ್ರಕಾಶ್ ಅಂತಿಮ ವಿಧಿವಿಧಾನಗಳನ್ನು ಪೂರೈಸಿದರು. ಈ ವೇಳೆ ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡ, ನಿಖಿಲ್‍ಕುಮಾರ್ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಶಾಸಕರಾದ ಟಿ.ಬಿ.ಜಯಚಂದ್ರ, ರಫಿಕ್ ಅಹಮ್ಮದ್, ಕೆ.ಎನ್. ರಾಜಣ್ಣ, ಮಾಜಿ ಸಂಸದ ಚಂದ್ರಪ್ಪ, ಶಾಸಕ ಶ್ರೀನಿವಾಸ್, ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ, ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿ ಕೃಷ್ಣ ಸೇರಿದಂತೆ ಹಲವು ಮುಖಂಡರು ಹಾಜರಿದ್ದು, ಅಗಲಿದ ಮುಖಂಡನಿಗೆ ಕಂಬನಿ ಮಿಡಿದರು.
ಇದಕ್ಕೂ ಮುನ್ನ ತುಮಕೂರಿನ ಜೆಡಿಎಸ್ ಪಕ್ಷದ ಕಚೇರಿ ಆವರಣದಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಕಾಲೇಜು ದಿನಗಳಿಂದಲೂ ಸತ್ಯನಾರಾಯಣ್ ಮತ್ತು ನಾನು ಒಟ್ಟಿಗೆ ರಾಜಕಾರಣ ಮಾಡಿಕೊಂಡು ಬಂದಿದ್ದೇವೆ. ಅವರು ಅನಾರೋಗ್ಯದಿಂದ ಬಳಲುತ್ತಿದ್ದ ವೇಳೆ ಆರೋಗ್ಯದ ಕಡೆ ಗಮನ ಹರಿಸುವಂತೆ ಹೇಳಿದ್ದೆ ಎಂದು ನೆನಪಿಸಿಕೊಂಡರು.