ತುಮಕೂರು: ಜನಮನ ಗೆಲ್ಲಲು ಸ್ಥಳೀಯ ಜನಪ್ರತಿನಿಧಿಗಳು ನಾ ಮುಂದು, ತಾ ಮುಂದು ಎನ್ನುತ್ತಾ ಟ್ಯಾಂಕರ್ಗಳ ಮೂಲಕ ಉಚಿತವಾಗಿ ನೀರು ಪೂರೈಸಲು ಪೈಪೋಟಿ ನಡೆಸುತ್ತಾರೆ. ಅವರು ಕೇವಲ ಓಟಿಗಾಗಿ ಒಂದೆರಡು ದಿನ ಗಿಡಗಳಿಗೆ ನೀರುಣಿಸಿ ಕೈ ಬಿಡುತ್ತಾರೆ. ಆದರೆ, ತುಮಕೂರು ನಗರದಲ್ಲೊಂದು ಸಂಘಟನೆ ಪರಿಸರ ಉಳಿವಿಗೆ ಸದ್ದಿಲ್ಲದೆ ಶ್ರಮಿಸುತ್ತಿದೆ.
ರಸ್ತೆ ಬದಿ ನೀರಿಲ್ಲದೆ ಸೊರಗುತ್ತಿರುವ ವೃಕ್ಷಗಳಿಗೆ ಕೆಲವರು ಒಂದೆರಡು ದಿನ ಟ್ಯಾಂಕರ್ ಮೂಲಕ ನೀರುಣಿಸಿ ಸುಮ್ಮನಾಗುತ್ತಾರೆ. ಭಾರತೀಯ ಕೃಷಿಕ ಸಮಾಜ ಎಂಬ ಸಂಘಟನೆ ಗಿಡಮರಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಒಂದು ವರ್ಷದಿಂದ ಸಸಿಗಳಿಗೆ ನೀರುಣಿಸುತ್ತಾ ಬಂದಿದೆ. ಅಲ್ಲದೆ, ಟ್ಯಾಂಕರ್ ಮೇಲೆ 'ಉಚಿತ ನೀರು ಮರ-ಗಿಡಗಳಿಗೆ ಮಾತ್ರ' ಎಂಬ ಬರಹವನ್ನೂ ಬರೆಸಿಕೊಂಡಿದೆ.
ಭಾರತೀಯ ಕೃಷಿಕ ಸಮಾಜ ತಿಂಗಳಿಗೆ ಸಾವಿರಾರು ವೃಕ್ಷಗಳಿಗೆ ನೀರುಣಿಸುವ ಮೂಲಕ ಪರಿಸರ ಉಳಿವಿಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ಈ ಸಂಘಟನೆ ಕಾರ್ಯಕ್ಕೆ ಅರಣ್ಯ ಇಲಾಖೆ ನೆಟ್ಟಿರುವ ಎಷ್ಟೋ ಸಸಿಗಳು ಮರು ಜೀವ ಪಡೆದುಕೊಂಡಿವೆ.
ಅರಣ್ಯ ಇಲಾಖೆ ಸಸಿಗಳನ್ನು ನೆಡುತ್ತದಯೇ ವಿನಃ ಅವುಗಳನ್ನು ಬೆಳೆಸಿ ಪೋಷಿಸುವ ಗೋಜಿಗೆ ಹೋಗುವುದಿಲ್ಲ. ಇಲಾಖೆ ಮಾಡಬೇಕಾದ ಕೆಲಸವನ್ನು ಕೃಷಿಕ ಸಮಾಜ ಮಾಡುತ್ತಿದೆ. ಅದಕ್ಕಾಗಿಯೇ ಇಬ್ಬರು ಸಿಬ್ಬಂದಿಯನ್ನೂ ನೇಮಿಸಿದೆ. ಸಂಘಟನೆಯ ಈ ಕಾರ್ಯಕ್ಕೆ ಎಲ್ಲಡೆಯೂ ಪ್ರಶಂಸೆ ವ್ಯಕ್ತವಾಗಿದೆ.