ತುಮಕೂರು : 9 ವರ್ಷ ಕೆಎಎಸ್ ಅಧಿಕಾರಿಯಾಗಿದ್ದ ವಿಧಾನಪರಿಷತ್ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಅನಿಲ್ ಕುಮಾರ್ ಸುಮಾರು 500 ಕೋಟಿಗಳಷ್ಟು ಹಣ ಸಂಪಾದನೆ ಮಾಡಿದ್ದಾರೆ. ಅದು ಯಾವ ರೀತಿ ಸಾಧ್ಯ ಎಂಬುದು ಊಹೆಗೂ ನಿಲುಕದ್ದು ಎಂದು ಮಾಜಿ ಶಾಸಕ ಚೆಲುವರಾಯಸ್ವಾಮಿ ಆರೋಪಿಸಿದರು.
ತುಮಕೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಪಕ್ಷದ ಶಕ್ತಿ ಇದೆ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ, ಹಲವು ಕಡೆ ಜೆಡಿಎಸ್ ಮುಖಂಡರು ಸಾಕಷ್ಟು ಉದ್ವೇಗದಿಂದ ಮಾತನಾಡುತ್ತಾರೆ ಎಂದರು.
ಇನ್ನು ಜೆಡಿಎಸ್ ಅಭ್ಯರ್ಥಿ ಅನಿಲ್ ಕುಮಾರ್ ಅವರನ್ನು ಸ್ವಯಂ ನಿವೃತ್ತಿ ತೆಗೆದುಕೊಳ್ಳುವಂತೆ ಬಲವಂತಪಡಿಸಿ, ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಅವರನ್ನು ಸರ್ಕಾರಿ ಕೆಲಸದಿಂದ ಬಿಡುಗಡೆಗೊಳಿಸಿರುತ್ತಾರೆ ಎಂದು ಆರೋಪಿಸಿದರು.
ಬಿಡಿಎ ಹಾಗೂ ಕೆಐಎಡಿಬಿಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ಅಭ್ಯರ್ಥಿಯಾಗಿರುವ ಅನಿಲ್ಕುಮಾರ್ ಎಷ್ಟು ಪ್ರಮಾಣದ ಹಣವನ್ನು ಕೊಡಬಹುದು ಎಂಬುದು ಈ ಚುನಾವಣೆಯಲ್ಲಿ ಬಹಿರಂಗವಾಗಲಿದೆ ಎಂದರು.
ಅನಿಲ್ ಕುಮಾರ್ ಮತದಾರರ ಬಳಿಗೆ ಕೈಮುಗಿದುಕೊಂಡು ಹೋಗುತ್ತಾರೋ ಅಥವಾ ಹಣದ ಹೊಳೆಯನ್ನೇ ಹರಿಸುತ್ತಾರೋ ಎಂಬುದನ್ನು ನೋಡಬೇಕಿದೆ ಎಂದು ತಿಳಿಸಿದರು.
ಇದನ್ನೂ ಓದಿ: ದಾವಣಗೆರೆ - ಚಿತ್ರದುರ್ಗದಿಂದ ಕಾಂಗ್ರೆಸ್ನಲ್ಲಿ ಸ್ಪರ್ಧಿಸಲು ಯಾವುದೇ ಗಂಡಸರು ಇರಲಿಲ್ವಾ: ಭೈರತಿ ಬಸವರಾಜ್
ಅನಿಲ್ ಕುಮಾರ್ ತಮ್ಮ ಮೇಲಿರುವ ಮೂರು ಪ್ರಕರಣಗಳಲ್ಲಿ ಎರಡನ್ನ ಮಾತ್ರ ತೋರಿಸಿದ್ದಾರೆ. ಇನ್ನೊಂದು ಪ್ರಕರಣವನ್ನು ಮುಚ್ಚಿಟ್ಟಿದ್ದಾರೆ. ಬಿಡಿಎನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅನಿಲ್ ಕುಮಾರ್ ಅವರ ಮೇಲೆ ಎಫ್ಐಆರ್ ದಾಖಲಾಗಿದೆ ಅಲ್ಲದೇ ಪ್ರಕರಣ ಕೂಡ ವಿಚಾರಣೆಯ ಹಂತದಲ್ಲಿದೆ.
ಅಂತಹ ಅಧಿಕಾರಿಯನ್ನು ಒತ್ತಡ ಹಾಕಿ ಸ್ವಯಂ ನಿವೃತ್ತಿ ಕೊಡಿಸಿ ಚುನಾವಣಾ ಕಣಕ್ಕೆ ನಿಲ್ಲಿಸಿರುವ ಜನತಾದಳಕ್ಕೆ ಯಾವ ರೀತಿ ನೈತಿಕತೆ ಇದೆ ಎಂಬುದನ್ನು ಪ್ರಶ್ನಿಸುವಂತಿದೆ ಎಂದರು.