ತುಮಕೂರು: ಎಷ್ಟೇ ಪ್ರತಿಭಾವಂತ ವ್ಯಕ್ತಿ ಇದ್ದರೂ ಸಹ ಅವರನ್ನು ಗುರುತಿಸುವುದು ಜಾತಿಯ ಆಧಾರದ ಮೇಲೆ. ಆಧುನಿಕ ಜಗತ್ತಿನಲ್ಲಿಯೂ ಸಮಾನತೆ ದೊರೆಯುತ್ತಿಲ್ಲ, ಎಲ್ಲಿಯವರೆಗೆ ದೇಶದಲ್ಲಿ ಬದಲಾವಣೆ ಆಗುವುದಿಲ್ಲವೋ ಅಲ್ಲಿಯವರೆಗೂ ಸಮಾಜಕ್ಕೆ ಒಳ್ಳೆಯದಾಗುವುದಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದರು.
ಛಲವಾದಿ ಮಹಾಸಭಾ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ನಗರದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಉದ್ಘಾಟಿಸಿ ಮಾತನಾಡಿದರು. ಯಾವುದೇ ದೇಶದಲ್ಲಿ ಇಂತಹ ಜಾತಿ ವ್ಯವಸ್ಥೆ ಇಲ್ಲ, ಭಾರತ ದೇಶದಲ್ಲಿ ಅತ್ಯಂತ ಪ್ರತಿಭಾವಂತ ವ್ಯಕ್ತಿಯಾಗಿದ್ದರೂ, ನಿಮ್ಮನ್ನು ಗುರುತಿಸುವುದು ಜಾತಿಯ ಆಧಾರದ ಮೇಲೆ. ಇದು ದುರ್ದೈವ ಸಂಗತಿ ಎಂದು ವಿಷಾದಿಸಿದರು.
ಭಾರತ ದೇಶದಲ್ಲಿ ಎಲ್ಲರೂ ಸಮಾನರು, ಎಲ್ಲರನ್ನು ಸಮಾನತೆಯಿಂದ ಕಾಣಬೇಕು ಎಂಬುದನ್ನು ತಿಳಿಸಲು ಡಾ. ಬಿ.ಆರ್ ಅಂಬೇಡ್ಕರ್ ಅವರು ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಸಮಾನತೆ ತರಲು ಭಗವಾನ್ ಬುದ್ಧರು ಅಂದಿನ ಕಾಲದಲ್ಲಿಯೇ ಶ್ರಮಪಟ್ಟಿದ್ದರು, ಆದರೆ ಅದು ಸಾಧ್ಯವಾಗಲಿಲ್ಲ. ಬಸವಣ್ಣ ಜಾತಿ ವ್ಯವಸ್ಥೆಯನ್ನು ನೋಡಿ ಮನುಷ್ಯ-ಮನುಷ್ಯರ ನಡುವಿನ ವ್ಯತ್ಯಾಸವನ್ನು ಕಂಡು, ತನ್ನ ಬ್ರಾಹ್ಮಣ ಜಾತಿಯನ್ನು ಬಿಟ್ಟು ಸಮಾನತೆ ತರಲು ಮುಂದಾದರು. ಆದರೆ ಆಗಲೂ ಸಾಧ್ಯವಾಗಲಿಲ್ಲ. ಸ್ವಾತಂತ್ರ್ಯ ಹೋರಾಟಗಾರ ಗಾಂಧೀಜಿ ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ ಎಂದರು.
ಇನ್ನು ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು.