ತುಮಕೂರು: ಕಳ್ಳತನವಾಗಿದ್ದ ಜಾನುವಾರುಗಳನ್ನ ಪತ್ತೆ ಹಚ್ಚಿ ಹಸ್ತಾಂತರ ಮಾಡಿದ ಪೊಲೀಸರಿಗೆ ರೈತರು ಸಿಹಿ ಹಂಚಿ ಕೃತಜ್ಞತೆ ಸಲ್ಲಿಸಿರುವ ಘಟನೆ ಮಧುಗಿರಿ ತಾಲೂಕಿನ ಕೊಡಿಗೆನಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ತಾಲೂಕಿನ ಸಿಂಗನಹಳ್ಳಿ ಗ್ರಾಮದಲ್ಲಿ ಕೆಲ ದಿನಗಳ ಹಿಂದೆ ರಾತ್ರಿ ವೇಳೆ ರೈತರು ಕೊಟ್ಟಿಗೆಗಳಲ್ಲಿ ಕಟ್ಟಿದ್ದ ಲಕ್ಷಾಂತರ ರೂ. ಬೆಲೆ ಬಾಳುವ ಸೀಮೆ ಹಸುಗಳನ್ನ ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಗ್ರಾಮದ ಹನುಮಂತರಾಯಪ್ಪ ಎಂಬುವವರು ಮೇ 27ರಂದು ಪೊಲೀಸರಿಗೆ ದೂರು ನೀಡಿದ್ದರು. ಜಾನುವಾರು ಕಳ್ಳರನ್ನ ಪತ್ತೆ ಹಚ್ಚಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ, ವಿಶೇಷ ಪೊಲೀಸ್ ತಂಡವನ್ನು ರಚಿಸಿದ್ದರು.
ಈ ವಿಶೇಷ ಪೊಲೀಸ್ ತಂಡ, ಶಬ್ಬಿರ್ ಅಹಮ್ಮದ್ ಮತ್ತು ಸೈಯದ್ ಮುಬಾರಕ್ ಎಂಬ ಇಬ್ಬರು ಆರೋಪಿಗಳನ್ನ ಬಂಧಿಸಿ ಅವರಿಂದ ನಾಲ್ಕು ಲಕ್ಷ ರೂಪಾಯಿ ಬೆಲೆ ಬಾಳುವ 7 ಸೀಮೆ ಹಸುಗಳನ್ನ ವಶಕ್ಕೆ ಪಡೆದಿದೆ. ಬಳಿಕ ಆರೋಪಿಗಳಿಂದ ವಶಕ್ಕೆ ಪಡೆದ ಹಸುಗಳನ್ನ ಕೊಡಿಗೆನಹಳ್ಳಿ ಪೊಲೀಸ್ ಠಾಣೆಯಲ್ಲಿ ರೈತರಿಗೆ ಹಸ್ತಾಂತರಿಸಿದ್ದು, ಈ ವೇಳೆ ರೈತರು ಪೊಲೀಸರಿಗೆ ಸಿಹಿ ಹಂಚಿ ಧನ್ಯವಾದ ತಿಳಿಸಿದ್ರು.