ತುಮಕೂರು: ಮೊಮ್ಮಕ್ಕಳು ಚುನಾವಣೆಗೆ ನಿಂತಿದ್ದರೂ ದೇವೆಗೌಡರು ತುಮಕೂರಿನಿಂದ ಸ್ಪರ್ಧಿಸುತ್ತಿರುವ ಬಗ್ಗೆ ಮಾಜಿ ಸಚಿವ ಅರವಿಂದ್ ಲಿಂಬಾವಳಿ ಪ್ರಶ್ನೆ ಮಾಡಿದ್ದಾರೆ.
ತುಮಕೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊಮ್ಮಕ್ಕಳು ಚುನಾವಣೆಗೆ ನಿಂತಿರುವುದರಿಂದ ಈ ಬಾರಿ ದೇವೇಗೌಡರು ಸ್ಪರ್ಧಿಸುವುದಿಲ್ಲ ಎಂದು ಭಾವಿಸಿದ್ದೆವು. ಆದರೆ ಅಧಿಕಾರದ ದುರಾಸೆಯಿಂದ ಅವರು ತುಮಕೂರಿನಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂದರು.
ಕಾಂಗ್ರೆಸ್-ಜೆಡಿಎಸ್ ಸೇರಿ ಬಿಜೆಪಿ ವಿರುದ್ದ ಅಪಪ್ರಚಾರ ಮಾಡ್ತಿದ್ದಾರೆ. ನಾನು ಈ ಹಿಂದೆ ಹಾಸನದ ಉಸ್ತುವಾರಿ ಸಚಿವನಾಗಿದ್ದಾಗ ಹೇಮಾವತಿ ನೀರನ್ನ ತುಮಕೂರಿಗೆ ಬಿಡಬಾರದು ಎಂದು ರೇವಣ್ಣ ಹೇಳಿದ್ರು. ನನ್ನ ಮಾತನ್ನೂ ಮೀರಿ ಈ ಬಗ್ಗೆ ಅಧಿಕಾರಿಗಳಿಗೆ ತಾಕೀತು ಮಾಡ್ತಿದ್ರು. ಆದಿಚುಂಚನಗಿರಿಯಲ್ಲಿ ಉತ್ಸವ ನಡೆಯುವ ವೇಳೆ ನಾಗಮಂಗಲಕ್ಕೂ ನೀರು ಬಿಡದಂತೆ ಅವರು ಅಡ್ಡಿಪಡಿಸಿದ್ದರು ಎಂದು ಆರೋಪಿಸಿದರು.
ದೇವೆಗೌಡರು ಯಾಕೆ ಹಾಸನ ಬಿಟ್ಟು ತುಮಕೂರಿಗೆ ಬಂದ್ರು ಎಂದರೆ ಮೊಮ್ಮಗನನ್ನು ಹಾಸನದಲ್ಲಿ ನಿಲ್ಲಿಸಿದ ಕಾರಣಕ್ಕೆ ಅಷ್ಟೇ ಅವರು ಇಲ್ಲಿ ಕಣಕ್ಕಿಳಿದಿದ್ದಾರೆ ಎಂದರು.
ತುಮಕೂರಿಗೆ ಅಮಿತ್ ಶಾ:
ಮಾರ್ಚ್ 16 ರಂದು ಅಮಿತ್ ಶಾ ತುಮಕೂರಿಗೆ ಬಂದು ಪ್ರಚಾರ ನಡೆಸಲಿದ್ದಾರೆ. ಜಿ.ಎಸ್. ಬಸವರಾಜು ಕ್ಷೇತ್ರದಲ್ಲಿ ಒಬ್ಬಂಟಿಯಾಗಿಲ್ಲ. ಇಡಿ ಪಕ್ಷ ಅವರೊಟ್ಟಿಗಿದೆ. ಇಡೀ ದೇಶದಲ್ಲಿ ಚುನಾವಣೆ ಇರೋದ್ರಿಂದ ಎಲ್ಲರೂ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ ಎಂದರು.