ತುಮಕೂರು: ರಾಷ್ಟ್ರೀಯ ಹೆದ್ದಾರಿ 4 ರಿಂದ ಸಿದ್ಧಗಂಗಾ ಮಠಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಅಂಡರ್ ಪಾಸ್ ಕಾಮಗಾರಿ ಸ್ಥಗಿತಗೊಂಡ ಹಿನ್ನೆಲೆ ಸ್ಥಳೀಯರು ಮತ್ತು ಭಕ್ತರು ಪ್ರತಿಭಟನೆಯ ಹಾದಿ ತುಳಿದಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 4 ರಿಂದ ಸಿದ್ಧಗಂಗಾ ಮಠಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಅಡ್ಡಲಾಗಿ ರೈಲ್ವೆ ಅಂಡರ್ ಪಾಸ್ ಕಾಮಗಾರಿ ನಡೆಸಲಾಗುತ್ತಿತ್ತು. ಇದೀಗ ಕಾಮಗಾರಿ ಸ್ಥಗಿತಗೊಂಡಿದೆ. ಮಠಕ್ಕೆ ಬರುವ ಭಕ್ತರು ಸುಮಾರು 4 ಕಿ.ಮೀ. ಪಯಾರ್ಯ ಮಾರ್ಗದಲ್ಲಿ ಬರುವಂತಹ ಸ್ಥಿತಿ ನಿಮಾರ್ಣವಾಗಿ ಒಂದು ವರ್ಷ ಕಳೆದಿದ್ದು, ಇದುವರೆಗೂ ಇಲಾಖೆ ಅಧಿಕಾರಿಗಳು, ಸರ್ಕಾರ ತಲೆ ಕೆಡಿಸಿಕೊಂಡಿಲ್ಲ. ಇದರಿಂದಾಗಿ ತೀವ್ರ ಸಮಸ್ಯೆ ಎದುರಾಗಿದ್ದು, ತಕ್ಷಣವೇ ಕಾಮಗಾರಿ ಪೂರ್ಣಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಲಾಕ್ಡೌನ್ ವೇಳೆ ರೈಲ್ವೆ ಅಂಡರ್ ಪಾಸ್ ಕಾಮಗಾರಿ ಆರಂಭಿಸಲಾಗಿತ್ತು. ಕ್ಯಾತ್ಸಂದ್ರ ವೃತ್ತದಲ್ಲಿ ಇಳಿದು ಬರಲು ಭಕ್ತರು ರೈಲ್ವೆ ಹಳಿ ದಾಟಲೇ ಬೇಕಿದೆ. ಕಾಮಗಾರಿ ಅರ್ಧಕ್ಕೆ ನಿಂತಿರುವುದರಿಂದ ಹಳಿ ದಾಟಲು ಭಕ್ತರು ಹರಸಾಹಸ ಪಡಬೇಕಿದೆ. ರೈಲ್ವೆ ಹಳಿ ಮೇಲೆ ಜನರಲ್ಲದೇ ಸುತ್ತಮುತ್ತಲ ಗ್ರಾಮದ ಜಾನುವಾರುಗಳು ವಿಧಿಯಿಲ್ಲದೆ ದಾಟುತ್ತಿವೆ. ಇದುವರೆಗೆ ಅನೇಕ ಜಾನುವಾರುಗಳು ರೈಲಿಗೆ ಸಿಲುಕಿ ಮೃತಪಟ್ಟಿದ್ದು, ಸಂಬಂಧಪಟ್ಟವರು ತಕ್ಷಣವೇ ಕಾಮಗಾರಿ ಪೂರ್ಣಗೊಳಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.