ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಹೆಚ್.ಡಿ. ದೇವೇಗೌಡರ ಸೋಲಿಗೆ, ಉಸ್ತುವಾರಿ ವಹಿಸಿಕೊಂಡಿದ್ದ ಡಿಸಿಎಂ ಡಾ. ಜಿ ಪರಮೇಶ್ವರ್ ಹಾಗೂ ಸಚಿವ ಎಸ್.ಆರ್. ಶ್ರೀನಿವಾಸ್ ಅವರೇ ಕಾರಣವೆಂದು ರಾಜ್ಯ ಕಾಂಗ್ರೆಸ್ ಯುವ ಘಟಕದ ಉಪಾಧ್ಯಕ್ಷ ಆರ್. ರಾಜೇಂದ್ರ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜೆಡಿಎಸ್ನವರು ಕಾಂಗ್ರೆಸ್ ನಾಯಕರನ್ನು ಒಟ್ಟಾಗಿ ಕರೆದೊಯ್ಯುವ ಪ್ರಯತ್ನ ಮಾಡಲಿಲ್ಲ. ದೇವೇಗೌಡರು ಗೆದ್ದರೆ ಹಾಸನ ಅಥವಾ ಬೆಂಗಳೂರಿನ ಪದ್ಮನಾಭನಗರಕ್ಕೆ ಆಡಳಿತ ಶಿಫ್ಟ್ ಆಗುತ್ತಾ ಎಂಬ ಆತಂಕ ಕಾರ್ಯಕರ್ತರಲ್ಲಿತ್ತು. ಈ ಹಿನ್ನೆಲೆಯಲ್ಲಿ ಮತದಾರರು ಅವರಿಗೆ ಮತ ನೀಡಲಿಲ್ಲ ಎಂದರು.
ಕೆ.ಎನ್. ರಾಜಣ್ಣ ಹಾಗೂ ಮುದ್ದಹನುಮೇಗೌಡರ ಮೇಲೆ ಅದ್ಯಾರೋ ವ್ಯಕ್ತಿ ಇಲ್ಲಸಲ್ಲದ ಆರೋಪ ಮಾಡಿದ್ದು ಕೂಡ ಅಭ್ಯರ್ಥಿಯ ಸೋಲಿಗೆ ಕಾರಣವಾಗಿದೆ. ಇಷ್ಟೇ ಅಲ್ಲದೆ, ದೇವೇಗೌಡರ ಸೋಲಿಗೆ ಅವರು ಸೊಸೆಯಂದಿರು ಕಾರಣ. ತಮ್ಮ ಮಕ್ಕಳಿಗೆ ಟಿಕೆಟ್ ಕೊಡಿಸುವ ಹುನ್ನಾರದಲ್ಲಿ ದೇವೇಗೌಡರನ್ನು ಅವರ ಸೊಸೆಯಂದಿರು ತುಮಕೂರಿಗೆ ಕಳುಹಿಸಿದ್ದಕ್ಕೆ ಸೋಲುವಂತಾಯಿತು. ಹೀಗೆ ದೇವೇಗೌಡರ ಸೋಲಿಗೆ ಹಲವು ಕಾರಣಗಳಿವೆ ಎಂದು ಆರ್ ರಾಜೇಂದ್ರ ವಿವರಿಸಿದರು.
ದೇವೇಗೌಡರು ತುಮಕೂರಿನಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸದಸ್ಯರ ಮನೆಗಳಿಗೆ ಹೋಗುತ್ತಾರೆ. ಆದರೆ, ನಾಯಕರಾದ ಕೆ.ಎನ್. ರಾಜಣ್ಣ ಅವರ ಮನೆಗೆ ಬಂದಿರಲಿಲ್ಲ. ಕ್ಯಾಸಂದ್ರಕ್ಕೆ ಬಂದರೂ, ರಾಜಣ್ಣ ಅವರ ಮನೆಗೆ ಬರಲಿಲ್ಲ, ಅಲ್ಲದೆ ನಾಯಕರನ್ನು ಕರೆದು ಒಗ್ಗಟ್ಟಾಗಿ ಹೋಗುವ ಬಗ್ಗೆ ಮಾತನಾಡದಿರುವುದು ಸಹ ಕಾಂಗ್ರೆಸ್ ನಾಯಕರಿಗೆ ಬೇಸರ ತರಿಸಿತ್ತು. ಜೆಡಿಎಸ್ ಜೊತೆ ಮೈತ್ರಿ ಮುರಿದುಕೊಳ್ಳಬೇಕಿದೆ, ಇಲ್ಲವಾದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ಗೆ ಉಳಿಗಾಲವಿಲ್ಲ. ಇನ್ನಾದರೂ ನಾಯಕರು ಅರ್ಥಮಾಡಿಕೊಂಡು ಪಕ್ಷ ಉಳಿಸುವ ನಿಟ್ಟಿನಲ್ಲಿ ಉತ್ತಮ ಯೋಜನೆ ಮಾಡಬೇಕಿದೆ ಎಂದು ಕಾಂಗ್ರೆಸ್ ಯುವ ಘಟಕದ ಉಪಾಧ್ಯಕ್ಷ ಒತ್ತಾಯಿಸಿದ್ದಾರೆ.
ಇನ್ನು ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ಅವರು ಮಾಜಿ ಶಾಸಕ ಕೆ.ಎನ್. ರಾಜಣ್ಣರ ಬಗ್ಗೆ ಹಗುರವಾಗಿ ಮಾತನಾಡಿರುವ ಬಗ್ಗೆ ಕಿಡಿಕಾರಿದ ರಾಜೇಂದ್ರ, ಗ್ರಾಮಾಂತರ ಶಾಸಕ ನಾಲಿಗೆ ಬಿಗಿ ಹಿಡಿದು ಮಾತನಾಡಲಿ, ಗಂಡಸುತನದ ಬಗ್ಗೆ ಮಾತನಾಡುವವನು, ಗಂಡಸುತನವಿದ್ದರೆ ಗ್ರಾಮಾಂತರ ಕ್ಷೇತ್ರದಲ್ಲಿ ರಾಜೀನಾಮೆ ನೀಡಲಿ. ನಾನು ಅದೇ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ನನ್ನ ವಿರುದ್ಧ ಗೆಲ್ಲಲಿ ಎಂದು ಆರ್ ರಾಜೇಂದ್ರ ಸವಾಲು ಹಾಕಿದರು.