ತುಮಕೂರು: ಜಿಲ್ಲೆಯಲ್ಲಿ ಸೈಬರ್ ಕ್ರೈಂಗಳು ಹೆಚ್ಚುತ್ತಲೇ ಇವೆ. ಜನರಿಗೆ ವಂಚಕರು ಕೇವಲ ಒಂದು ಲಿಂಕ್ ಕಳಿಸಿ ಮೋಸ ಮಾಡುತ್ತಿದ್ದಾರೆ. ನಿಮ್ಮ ಬ್ಯಾಂಕ್ ಖಾತೆ ಬ್ಲಾಕ್ ಆಗಿದ್ದು, ಅದನ್ನು ಸರಿಪಡಿಸುವುದಾಗಿ ನಂಬಿಸಿ ಅಕೌಂಟ್ನಿಂದ 1.69 ಲಕ್ಷ ರೂ. ಎಗರಿಸಿದ ಘಟನೆ ನಡೆದಿದೆ. ತುಮಕೂರು ಅಶೋಕ್ ನಗರ ನಿವಾಸಿ ಲೋಕೇಶ್ ಹಣ ಕಳೆದುಕೊಂಡ ವ್ಯಕ್ತಿ.
ಲೋಕೇಶ್ ಅವರ ಮೊಬೈಲ್ ನಂಬರ್ಗೆ ಜುಲೈ 26ರಂದು ಅಪರಿಚಿತ ವ್ಯಕ್ತಿಯೊಬ್ಬ ಮೆಸೇಜ್ ಕಳುಹಿಸಿದ್ದ. ಆ ಮೆಸೇಜ್ಅಲ್ಲಿ 'ನಿಮ್ಮ ನೆಟ್ ಬ್ಯಾಂಕಿಂಗ್ ಖಾತೆ ಬ್ಲಾಕ್ ಆಗಿದ್ದು, ಅದು ಸರಿಯಾಗಬೇಕಾದ್ರೆ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ' ಎಂದಿತ್ತು. ಜೊತೆಗೆ ಅದೇ ಸಂದೇಶದಲ್ಲಿ ಲಿಂಕ್ ಕೂಡ ನೀಡಲಾಗಿತ್ತು. ಇದು ನಿಜವಿರಬಹುದೆಂದು ಲೋಕೇಶ್ ನಂಬಿ, ಆ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದಾರೆ. ತಕ್ಷಣವೇ ಲೋಕೇಶ್ ಅವರ ಎಸ್ಬಿಐ ಖಾತೆಯಿಂದ ಹಂತ ಹಂತವಾಗಿ ಒಟ್ಟು 1,69,997 ರೂ. ಕಟ್ ಆಗಿದೆ.
ಗಾಬರಿಗೊಂಡ ಲೋಕೇಶ್ ಪರಿಶೀಲನೆ ನಡೆಸಿದಾಗ ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಸೈಬರ್, ಆರ್ಥಿಕ, ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆ (ಸಿಇಎನ್)ಗೆ ದೂರು ನೀಡಿದ್ದಾರೆ.
('ಆನ್‌ಲೈನ್ ಹುಡುಗಿ' ಜೊತೆ 'ಚಾಟ್ ಮಸಾಲ': 11 ಲಕ್ಷ ರೂಪಾಯಿ ಕಳ್ಕೊಂಡ 77ರ ವೃದ್ಧ!)