ತುಮಕೂರು: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಇಳಿಕೆಯಾಗಿದೆ. ಮೇ 25 ರಂದು 76 ರಷ್ಟಿದ್ದ ರೆಡ್ ಝೋನ್ಗಳ ಸಂಖ್ಯೆ ಜೂನ್ 2ರಂದು 27ಕ್ಕೆ ಇಳಿದಿದೆ. ಅದರಂತೆಯೇ ಹಾಟ್ಸ್ಪಾಟ್ಗಳ ಸಂಖ್ಯೆಯೂ 240 ರಿಂದ 123ಕ್ಕೆ ಬಂದಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು.
ಅದೇ ರೀತಿ ಶೇ. 48ರಷ್ಟಿದ್ದ ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ. 17ಕ್ಕೆ ತಗ್ಗಿದೆ. 2,500 ರಿಂದ 3,000 ವರೆಗೆ ದೃಢವಾಗುತ್ತಿದ್ದ ಸೋಂಕು ಪ್ರಕರಣಗಳ ಸಂಖ್ಯೆಯೂ 750-850ಕ್ಕೆ ಇಳಿದಿದೆ. ಪಾಸಿಟಿವಿಟಿ ಪ್ರಮಾಣ ಮತ್ತಷ್ಟು ಇಳಿಕೆಯಾಗಲಿದೆ. ಗ್ರಾಮೀಣ ಭಾಗದಲ್ಲಿಯೂ ಸೋಂಕಿನ ಪ್ರಮಾಣ ತಗ್ಗಿದ್ದು, ಮೇ. 25ರಂದು ಒಂದೂ ಪ್ರಕರಣವಿಲ್ಲದ 810 ಹಳ್ಳಿಗಳಿದ್ದವು. ಜೂ. 2ಕ್ಕೆ 1,242 ಹಳ್ಳಿಗಳಲ್ಲಿ ಸೋಂಕಿನ ಪ್ರಕರಣಗಳೇ ಇಲ್ಲ. ಒಂದೇ ಒಂದು ಸೋಂಕಿನ ಪ್ರಕರಣವಿರುವ 503 ಗ್ರಾಮಗಳಿವೆ ಎಂದರು.
ಕೋವಿಡ್ ಪರೀಕ್ಷೆ ಹೆಚ್ಚಳ
ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಕೋವಿಡ್ ಪರೀಕ್ಷೆ ಹೆಚ್ಚಿನ ಪ್ರಮಾಣದಲ್ಲಿ ಮಾಡಬೇಕು. ಸೋಂಕು ದೃಢಪಟ್ಟವರಿಗೆ ತಕ್ಷಣವೇ ಕೋವಿಡ್ ಔಷಧ ಕಿಟ್ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತಾಲೂಕು ಆಸ್ಪತ್ರೆಗಳಲ್ಲಿ ನೀಡುವ ಔಷಧಗಳನ್ನು ಹೊರತುಪಡಿಸಿ, ಈಗಾಗಲೇ 35 ಸಾವಿರ ಮೆಡಿಸನ್ ಕಿಟ್ ಸಿದ್ಧಪಡಿಸಿದ್ದೇವೆ. ಅದರಲ್ಲಿ 31 ಸಾವಿರ ಕಿಟ್ ವಿತರಣೆ ಮಾಡಿದ್ದೇವೆ. ದಾನಿಗಳು ಕೂಡ ಸೋಂಕಿತರಿಗೆ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಆಹಾರದ ಕಿಟ್ ನೀಡುವ ಮೂಲಕ ನೆರವಾಗುತ್ತಿದ್ದಾರೆ. ಮುಂದಿನ ವಾರ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಕಡಿಮೆ ಮಾಡಲು ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಕೋವಿಡ್ ಲಸಿಕೆ ವಿತರಣೆ ಸಂಬಂಧ ಈಗಾಗಲೇ ಸಭೆ ನಡೆಸಿ, ಎಲ್ಲಾ ಪಿಎಚ್ಸಿ ವೈದ್ಯಾಧಿಕಾರಿ, ತಾಲೂಕು ವೈದ್ಯಾಧಿಕಾರಿ, ತಹಶೀಲ್ದಾರ್, ತಾಲೂಕು ಪಂಚಾಯತಿ ಇಒ, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಸರ್ಕಾರದಿಂದ ಪೂರೈಕೆಯಾಗುತ್ತಿರುವ ಲಸಿಕೆಯನ್ನು 45 ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತಿದೆ. ಅದರಂತೆಯೇ 18 ರಿಂದ 44 ವರ್ಷದೊಳಗಿನ ಪ್ರಿಯಾರಿಟಿ ಗುಂಪುಗಳಿಗೆ ಲಸಿಕೆ ಬಂದ ದಿನವೇ ಸಮರ್ಪಕ ಮಾಹಿತಿಯನ್ನು ಒದಗಿಸಿ ವಿತರಣೆ ಮಾಡಬೇಕೆಂದು ಸೂಚಿಸಿದ್ದು, ಅದರಂತೆ ಲಸಿಕಾಕರಣ ನಡೆಯುತ್ತಿದೆ. ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಶೇ. 51ರಷ್ಟು ಲಸಿಕೆ ನೀಡಲಾಗಿದೆ. ಅಂತೆಯೇ 18 ರಿಂದ 44 ವರ್ಷದೊಳಗಿನ ಪ್ರಿಯಾರಿಟಿ ಗುಂಪುಗಳ 24 ಸಾವಿರ ಜನರಿಗೆ ಈಗಾಗಲೇ ಲಸಿಕೆ ನೀಡಲಾಗಿದೆ ಎಂದರು.
ಗ್ರಾಮ ಮಟ್ಟದಲ್ಲಿ ಲಸಿಕಾ ವಿತರಣೆಗೆ ಗ್ರಾಮಲೆಕ್ಕಿಗ ಮತ್ತು ಪಿಡಿಒಗಳನ್ನು ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಗ್ರಾಮಲೆಕ್ಕಿಗರು ಪ್ರತಿ ಗ್ರಾಮದ ಪ್ರತಿಯೊಬ್ಬರ ಮತದಾನದ ಗುರುತಿನ ಚೀಟಿ ಮಾಹಿತಿ ಇಟ್ಟುಕೊಂಡು ಲಸಿಕೆ ಯಾರಿಗೆ ನೀಡಿಲ್ಲ, ಯಾರಿಗೆ ನೀಡಲಾಗಿದೆ ಎಂಬುದನ್ನು ಗುರುತು ಮಾಡಿಕೊಳ್ಳಬೇಕು. ಯಾರು ಲಸಿಕೆ ಪಡೆದಿಲ್ಲವೋ ಅವರ ಮಾಹಿತಿಯನ್ನು ಆಶಾ ಕಾರ್ಯಕರ್ತೆಯರಿಗೆ ಒದಗಿಸಬೇಕು. ಈ ಮಾಹಿತಿ ಆಧಾರದಲ್ಲಿ ಲಸಿಕೆ ಲಭ್ಯವಿದ್ದಾಗ ಲಸಿಕೆ ಪಡೆಯದವರಿಗೆ ಆಶಾ ಕಾರ್ಯಕರ್ತೆಯರು ಲಸಿಕೆ ಹಾಕಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟ 7,51,243 ಮಂದಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ಈಗಾಗಲೇ 3,84,908 ಜನರಿಗೆ ಲಸಿಕೆ ನೀಡಲಾಗಿದೆ. ಇದಲ್ಲದೆ ಮುಂಚೂಣಿ ಕಾರ್ಯಕರ್ತರು ಸೇರಿದಂತೆ ಇತರೆ ಸಿಬ್ಬಂದಿಗೆ 4,50,808 ಮೊದಲನೇ ಡೋಸ್ ಮತ್ತು 1,15,215 ಎರಡನೇ ಡೋಸ್ ಸೇರಿದಂತೆ ಒಟ್ಟು 5,66,023 ಡೋಸ್ ಲಸಿಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಇಂದು ರಾಜ್ಯಪಾಲರನ್ನು ಭೇಟಿಯಾಗಿ ಲಸಿಕೆ ಖರೀದಿಸುವುದಕ್ಕೆ ಅನುಮತಿ ಕೋರಲಿರುವ ಡಿಕೆಶಿ