ತುಮಕೂರು: ವರದಕ್ಷಿಣೆ ತರುವಂತೆ ಪತ್ನಿಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಿರುಕುಳ ನೀಡಿದ್ದ ಆಕೆಯ ಪತಿ ಸೇರಿದಂತೆ ಒಟ್ಟು ಐವರ ವಿರುದ್ಧ ಪ್ರಕರಣ ದಾಖಲಿಸುವಂತೆ ಮಧುಗಿರಿ ಹೆಚ್ಚುವರಿ ಮತ್ತು ಸಿವಿಲ್ ನ್ಯಾಯಾಲಯವು ನೀಡಿದ ಆದೇಶದನ್ವಯ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಧುಗಿರಿ ತಾಲೂಕಿನ ಬ್ಯಾಲ್ಯಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಅಗ್ರಹಾರದ (ವಡ್ಡರಹಟ್ಟಿ ಮಜರೆ ಗ್ರಾಮ) ಹನುಮಂತ ಮತ್ತು ಮೀನಾಕ್ಷಿ ಕಳೆದ ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದರು. ಮದುವೆ ಸಮಯದಲ್ಲಿ ವರದಕ್ಷಿಣೆಯಾಗಿ 8 ಲಕ್ಷ ರೂ. ಮೌಲ್ಯದ 20 ಗ್ರಾಂ ಬ್ರಾಸ್ಲೈಟ್, 10 ಗ್ರಾಂ ಉಂಗುರ , 25 ಗ್ರಾಂ ಚೈನ್, 1ಲಕ್ಷದ 40 ಸಾವಿರ ರೂ. ನಗದು ಹಣ ಕೊಡಲಾಗಿತ್ತು.
ಮದುವೆಯಾದ ನಂತರ ಪತಿ ಹನುಮಂತ ಹಾಗೂ ಕುಟುಂಬಸ್ಥರಾದ ಗಂಗಾಧರ, ರಾಮಂಜಿನಪ್ಪ, ರಾಧಾ, ಅಂಜಿನಪ್ಪ ಎಂಬುವರು ನಿತ್ಯ ವರದಕ್ಷಿಣೆ ತರುವಂತೆ ಮೀನಾಕ್ಷಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡಿ ಮನೆಯಿಂದ ಹೊರ ಹಾಕಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಮಧುಗಿರಿ ಅಧಿಕ ಮತ್ತು ಜಿಲ್ಲಾ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರ ಆದೇಶದಂತೆ ಅವರ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸುವಂತೆ ಕೊಡಿಗೇನಹಳ್ಳಿ ಪೊಲೀಸ್ ಠಾಣೆಗೆ ಆದೇಶ ನೀಡಿದ್ದಾರೆ.