ತುಮಕೂರು: ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆಯುತ್ತಿರುವ ಸಾವಿರಾರು ಕೋಟಿ ರೂ. ಕಾಮಗಾರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದ್ದು, ಇದರಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಭಾಗಿಯಾಗಿದ್ದಾರೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬುಗುಡನಹಳ್ಳಿ ಕೆರೆಯಲ್ಲಿ ಹೂಳು ಎತ್ತುವುದು, ಅಮನಿಕೆರೆ ಅಭಿವೃದ್ಧಿ, ಸ್ಟೇಡಿಯಂ ಮರು ನಿರ್ಮಾಣ, ರಿಂಗ್ ರೋಡ್ ನಿರ್ಮಾಣ ಸೇರಿದಂತೆ ಅನೇಕ ಕಾಮಗಾರಿಗಳು ನಡೆಯುತ್ತಿವೆ. ಆದರೆ ಇವೆಲ್ಲವೂ ಅವೈಜ್ಞಾನಿಕ ಕಾಮಗಾರಿಗಳಾಗಿವೆ ಎಂದು ಟೀಕಿಸಿದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆಯಲು ಪ್ರಮುಖ ಕಾರಣರಾಗಿದ್ದಾರೆ. ಕಳೆದ ಆರೇಳು ವರ್ಷಗಳಿಂದ ತುಮಕೂರಿನ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿರುವ ಶಾಲಿನಿ ರಜನೀಶ್ ಇಲ್ಲಿ ದರ್ಬಾರು ನಡೆಸುತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ತೊಡಗಿ, ಕೋಟಿ ಕೋಟಿ ಹಣ ಲೂಟಿ ಹೊಡೆಯುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಶಾಲಿನಿ ರಜನೀಶ್ ಬೆಂಗಳೂರಿನಲ್ಲೇ ಕುಳಿತುಕೊಂಡು ಕಂಪನಿಗಳಿಗೆ ಟೆಂಡರ್ ನೀಡುತ್ತಿದ್ದಾರೆ. ವಿದೇಶಿ ಕಂಪನಿಗಳ ಮೇಲೆ ಇವರಿಗೆ ವ್ಯಾಮೋಹ ಹೆಚ್ಚು. ಇಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದು ಮೇಲ್ನೋಟಕ್ಕೆ ತಿಳಿದಿದೆ. ಹಣದ ಲೂಟಿಗೆ ಕಾರಣವಾಗಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಸರ್ಕಾರ ಈ ಕೂಡಲೇ ಅಮಾನತು ಮಾಡುವ ಜೊತೆಗೆ ಕಾಮಗಾರಿಯಲ್ಲಿ ಆಗಿರುವ ಅಕ್ರಮ ತನಿಖೆಗೆ ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ಇನ್ನು ತುಮಕೂರು ನಗರ ಧೂಳುಮಯವಾಗಿದೆ. ಇಲ್ಲಿ ಯಾವ ಕಾಮಗಾರಿ ನಡೆಯುತ್ತಿದೆ ಎಂಬುದೇ ತಿಳಿದಿಲ್ಲ. ಕಾಮಗಾರಿ ನಡೆಯುವ ಸ್ಥಳದಲ್ಲಿ ಯಾವುದೇ ನಾಮಫಲಕಗಳನ್ನು ಹಾಕುತ್ತಿಲ್ಲ. ಇದರಿಂದ ವಾಹನ ಸವಾರರು ಅಪಘಾತಕ್ಕೆ ತುತ್ತಾಗುವಂತಾಗಿದೆ. ಈಗಲಾದರೂ ಸರಿಯಾದ ರೀತಿಯಲ್ಲಿ ಕಾಮಗಾರಿ ನಡೆಸದಿದ್ದರೆ ಅಧಿಕಾರಿಗಳ ಕಚೇರಿಗೆ ಬೀಗ ಜಡಿದು ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.