ತುಮಕೂರು : ಕಾಂಗ್ರೆಸ್‌ನವರು ಬೇರೆ ಬೇರೆ ಉದ್ದೇಶಕ್ಕೆ ಎಷ್ಟು ಭೂಮಿ ನೀಡಿದ್ದಾರೆ ಎಂಬುವುದರ ಬಗ್ಗೆ ನಮ್ಮ ಹತ್ತಿರ ಲಿಸ್ಟ್ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ತುಮಕೂರಿನ ಜಿಲ್ಲಾಸ್ಪತ್ರೆ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನ ಕ್ಯಾನ್ಸರ್ ಆಸ್ಪತ್ರೆ, ತಾಯಿ ಮಕ್ಕಳ ಆಸ್ಪತ್ರೆ ಹಾಗೂ ಅಪೌಷ್ಟಿಕ ಮಕ್ಕಳ ಪುನಶ್ಚೇತನ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಚಾಣಕ್ಯ ವಿವಿಗೆ ಜಮೀನು ಮಂಜೂರಿಗೆ ಕಾಂಗ್ರೆಸ್ ವಿರೋಧಿಸುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಒಂದೊಳ್ಳೆ ಉದ್ದೇಶಕ್ಕೆ ನಾವು ಜಮೀನು ನೀಡುತ್ತಿದ್ದೇವೆ. ಸರ್ಕಾರ ರಾಜ್ಯದಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳಿಗೆ ಹಿಂದಿನಿಂದಲೂ ಜಾಗ ಕೊಡುತ್ತಾ ಬಂದಿದೆ. ಅದೇ ರೀತಿ ಈಗಲೂ ಕೊಟ್ಟಿದೆ. ಅದರಲ್ಲಿ ವಿಶೇಷವೇನಿಲ್ಲ ಎಂದರು.
ಭಾನುವಾರವೂ ಕೋವಿಡ್ ಲಸಿಕೆ ನೀಡಬೇಕೆಂದು ಒತ್ತಾಯ ವಿಚಾರದಲ್ಲಿ ಚಿಂತನೆ ನಡೆಯುತ್ತಿದೆ. ಕೆಲವು ವಲಯಗಳಿಂದ ನಮಗೂ ಬೇಡಿಕೆ ಬಂದಿದೆ. ಅದನ್ನ ಗಮನಿಸಿ ಅದಕ್ಕೊಂದು ನಿರ್ಣಯ ಕೈಗೊಳ್ಳುತ್ತೇವೆ.
ಭಾನುವಾರ ದಿನ ಹೆಚ್ಚು ಜನರು ಬಿಡುವಿನಲ್ಲಿರುತ್ತಾರೆ. ಅಂದು ವ್ಯಾಕ್ಸಿನೇಷನ್ಗೆ ಅನುಕೂಲವಾಗಲಿದೆ. ಈ ಬಗ್ಗೆ ಡಾ.ಸುಧಾಕರ್ ಆದಷ್ಟು ಬೇಗ ತೀರ್ಮಾನ ಮಾಡುತ್ತಾರೆ. ಅದೇ ದಿಕ್ಕಿನಲ್ಲಿ ನಮ್ಮ ಚಿಂತನೆ ಕೂಡ ಇದೆ ಎಂದರು.
ತುಮಕೂರು ಜಿಲ್ಲೆಗೆ ಮೆಡಿಕಲ್ ಕಾಲೇಜು ಬೇಡಿಕೆ ವಿಚಾರದಲ್ಲಿ ಮೆಡಿಕಲ್ ಕಾಲೇಜು ಬಗ್ಗೆ ವೇದಿಕೆ ಮೇಲೆ ತೀರ್ಮಾನ ಮಾಡಲು ಸಾಧ್ಯವಿಲ್ಲ. ಈ ಮೊದಲು ಮಾಧುಸ್ವಾಮಿ ಅದರ ಬಗ್ಗೆ ಬೇಡಿಕೆಯಿಟ್ಟಿದ್ದಾರೆ. ಜಿಲ್ಲಾ ಕೇಂದ್ರ ಬಿಟ್ಟು ಬೇರೆ ಕಡೆ ಕೊಡುವ ವ್ಯವಸ್ಥೆ ಬಂದರೆ ತುಮಕೂರಿಗೆ ಮೊದಲ ಪ್ರಾಶಸ್ತ್ಯ ನೀಡುತ್ತೇವೆ ಎಂದು ಸಿಎಂ ಭರವಸೆ ನೀಡಿದರು.
ಇದನ್ನೂ ಓದಿ: ತುಮಕೂರಿನ ನೂತನ ಕ್ಯಾನ್ಸರ್ ಆಸ್ಪತ್ರೆ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಿರುವ ಸಿಎಂ