ತುಮಕೂರು: ತುಮಕೂರಿನ ಜಿಲ್ಲೆಯ ರೈತರೊಬ್ಬರು ತಾವು ಬೆಳೆದ ಹಲಸನ್ನು ರಕ್ಷಿಸಲು ತಮ್ಮ ತೋಟದಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದಾರೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸೀಗೇನಹಳ್ಳಿಯ ರೈತ ಪರಮೇಶ್ ಸುಮಾರು 20 ಎಕರೆ ಜಮೀನಿನಲ್ಲಿ ಹಲಸು, ತೆಂಗು ಬೆಳೆದಿದ್ದಾರೆ.
ಇವರ ತಂದೆ 37 ವರ್ಷಗಳ ಹಿಂದೆ ತಮ್ಮ ಜಮೀನಿನಲ್ಲಿ ಹಲಸಿನ ಬೀಜವನ್ನು ಹಾಕಿದ್ದರು. ಪ್ರತಿ ವರ್ಷ ಈ ಗಿಡದಲ್ಲಿ ಬೆಳೆಯುತ್ತಿದ್ದ ಸಿದ್ದು ತಳಿಯ ಹಲಸನ್ನು ಮನೆ ಮಂದಿಯೆಲ್ಲ ತಿನ್ನುತ್ತಿದ್ದರು. ಇದೀಗ ತೋಟದಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿರುವ ಈ ಸಿದ್ದು ಹಲಸಿನ ಮರ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ.
ಅಪರೂಪದ ಸಿದ್ದು ಹಲಸಿನ ಮರ ತೋಟದಲ್ಲಿದೆ ಎಂಬ ವಿಷಯ ಸ್ವತಃ ಪರಮೇಶ್ ಅವರಿಗೆ ಗೊತ್ತಿರಲಿಲ್ಲ. ಇದೀಗ ಈ ಕುಟುಂಬಕ್ಕೆ ಸಿದ್ದು ತಳಿಯ ಹಲಸು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ತಂದುಕೊಟ್ಟಿದೆ.
ಸಿದ್ದು ತಳಿಯ ಹಲಸಿನ ಸಸಿಗೆ ಹೆಚ್ಚಿದ ಬೇಡಿಕೆ:
2017ರಂದು ಹೆಸರುಘಟ್ಟದ ಐಹೆಚ್ಆರ್ ವತಿಯಿಂದ ಸಿದ್ದು ಹಲಸಿನ ಮರವನ್ನು ಗುರುತಿಸಲಾಯಿತು. ಐಹೆಚ್ಆರ್ನಿಂದ 2017ರಿಂದ 18ರವರೆಗೆ ಒಂದು ವರ್ಷ 10 ಸಾವಿರ ಹಲಸಿನ ಸಸಿಗಳನ್ನು ಕಸಿ ಮಾಡಲಾಯಿತು. ಕೇರಳ, ಆಂಧ್ರ, ದೆಹಲಿ, ತಮಿಳು ನಾಡು ರಾಜ್ಯಗಳ ವತಿಯಿಂದ ಈ ಸಸಿಗೆ ಬಹುಬೇಡಿಕೆ ಬಂದಿದೆ.
ಮುಂದಿನ 4 ವರ್ಷದ ಅವಧಿಯಲ್ಲಿ ಪ್ರತಿ ವರ್ಷ 25 ಸಾವಿರ ಗಿಡಗಳಂತೆ 1ಲಕ್ಷ ಸಿದ್ದು ಹಲಸಿನ ಗಿಡಗಳನ್ನು ಕಸಿ ಮಾಡಿ ಮಾರಾಟ ಮಾಡಲು ಯೋಜನೆ ರೂಪಿಸಲಾಗಿದೆ. ಪ್ರಪಂಚದ 40 ದೇಶಗಳಿಂದ ರೈತರು ಸಿದ್ದು ಹಲಸಿನ ಸಸಿಗೆ ಬೇಡಿಕೆ ಇರಿಸಿದ್ದಾರೆ.
ಐಹೆಚ್ಆರ್ನೊಂದಿಗೆ ರೈತನ ಒಪ್ಪಂದ
2017ರಿಂದ 2020ರವರೆಗೆ ಭಾರತ ಸರ್ಕಾರದ ಹೆಸರುಘಟ್ಟದ ಐಹೆಚ್ಆರ್ನೊಂದಿಗೆ ಮತ್ತು ರೈತ ಪರಮೇಶ್ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇವರ ತೋಟದಲ್ಲಿರುವ ಸಿದ್ದು ತಳಿಯ ಹಲಸಿನ ಗಿಡಗಳನ್ನು ಕಸಿ ಮಾಡಲು ನಿರ್ಧರಿಸಲಾಗಿದೆ. ಇದು ರೈತರ ಆದಾಯ ದ್ವಿಗುಣಗೊಳಿಸುವ ಯೋಜನೆಯಾಗಿದೆ. ಪರಮೇಶ್ ಅವರಿಗೆ ಕಳೆದ ವರ್ಷ 5ಲಕ್ಷ ರೂ. ಅನ್ನು ಆದಾಯದ ಹಣವನ್ನಾಗಿ ನೀಡಲಾಗಿದೆ.
ಸಿದ್ದು ಹಲಸು ತಾಮ್ರ ಬಣ್ಣದಿಂದ ಕೂಡಿದ್ದಾಗಿದೆ. ಸಂಶೋಧನೆ ಪ್ರಕಾರ ಇದರಲ್ಲಿ ಲೈಕೋಪಿನ್, ಕೆರೋಟಿನೈಡ್, ಫ್ಲೈವನೈಡ್, ಶೇ.31ರಷ್ಟು ಅತಿಯಾದ ರುಚಿ ಅಂಶದಿಂದ ಕೂಡಿದೆ ಎಂಬುದು ಬೆಳಕಿಗೆ ಬಂದಿದೆ. ಮನುಷ್ಯನ ದೇಹದಲ್ಲಿ ಆಂಟಿ ಆಕ್ಸಿಟೆಂಡ್ ಉತ್ಪತ್ತಿ ಮಾಡುವ ಗುಣ ಹೊಂದಿರುವ ಖನಿಜಾಂಶ ಒಳಗೊಂಡಿದೆ. ಜೀವ ಕೋಶಗಳ ಅಭಿವೃದ್ಧಿಗೆ ಈ ಖನಿಜಾಂಶ ಸಹಕಾರಿಯಾಗಲಿದೆ ಎಂಬುದು ಪತ್ತೆಯಾಗಿದೆ.
ಇದನ್ನೂ ಓದಿ: ತುಮಕೂರು: ಭಾರಿ ಮಳೆಗೆ ಗುಡ್ಡ ಕುಸಿತ - ಸಂಚಾರ ಅಸ್ತವ್ಯಸ್ತ!
ಇನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ತಂದುಕೊಟ್ಟಿರುವ ಅಪರೂಪದ ಸಿದ್ದು ಹಲಸಿನ ಮರವನ್ನು ಕಾಪಾಡಿಕೊಂಡು ಹೋಗುವುದೇ ಸಾಹಸದ ಕೆಲಸವಾಗಿದೆ. ವಿಶೇಷವಾದ ಈ ಮರವನ್ನು ನೋಡಲು ವಿದೇಶಿ ರೈತರು, ವಿಜ್ಞಾನಿ, ಆಸಕ್ತರು ಬರುತ್ತಿದ್ದಾರೆ. ಇದನ್ನು ರಕ್ಷಣೆ ಮಾಡಲು ಮರದ ನಾಲ್ಕೂ ಭಾಗದಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. 24 ಗಂಟೆಯೂ ಮರದ ಸುತ್ತಲೂ ಸೆನ್ಸಾರ್ ಕ್ರಾಸಿಂಗ್ ಮಾಡಲಾಗಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಸೆಕ್ಯುರಿಟಿ ಗಾರ್ಡ್ಗಳನ್ನು ನಿಯೋಜಿಸಲು ಸಿದ್ಧತೆ ನಡೆಸಿದ್ದಾರೆ. ಮರದ ಸುತ್ತಲೂ ನಡೆಯುವ ಚಟುವಟಿಕೆಯನ್ನು ರೈತ ಪರಮೇಶ್ ಎಲ್ಲಿಯೇ ಇದ್ದರೂ ಅದರ ಮಾಹಿತಿಯನ್ನು ಮೊಬೈಲ್ನಲ್ಲಿ ಪಡೆಯುವ ವ್ಯವಸ್ಥೆ ಮಾಡಿಕೊಂಡಿದ್ದಾರೆ.