ತುಮಕೂರು: ಮುಂಬರುವ ಆಯುಧ ಪೂಜೆ ಮತ್ತು ದೀಪಾವಳಿ ಹಬ್ಬದ ಹೆಸರಿನಲ್ಲಿ ಪೊಲೀಸರು ಸಾರ್ವಜನಿಕರಿಂದ ವಂತಿಗೆ ವಸೂಲಿ ಮಾಡುತ್ತಿರುವುದಕ್ಕೆ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೊರಡಿಸಿರುವ ಆದೇಶ ಪ್ರತಿ ಫುಲ್ ವೈರಲ್ ಆಗಿದೆ.
ಖುದ್ದು ಅಧಿಕೃತ ಆದೇಶವೊಂದನ್ನು ಹೊರಡಿಸಿರುವ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲೆಯ ಹಲವು ಪೊಲೀಸ್ ಠಾಣೆಗಳಲ್ಲಿ ಈ ರೀತಿ ಹಬ್ಬದ ನೆಪದಲ್ಲಿ ಹಣ ವಸೂಲಿ ಮಾಡುತ್ತಿರುವುದು ಮತ್ತು ಇದಕ್ಕೆ ಪೊಲೀಸ್ ಅಧಿಕಾರಿಗಳು ಸಹಕಾರ ನೀಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇದು ಪೊಲೀಸ್ ಇಲಾಖೆಯ ಘನತೆ ಮತ್ತು ಗೌರಕ್ಕ ಧಕ್ಕೆ ಉಂಟುಮಾಡುತ್ತದೆ. ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ತಮ್ಮ ಸಿಬ್ಬಂದಿಗೆ ಈ ಕೃತ್ಯದಲ್ಲಿ ತೊಡಗದಂತೆ ಸೂಚನೆ ನೀಡಬೇಕು. ಈ ಆದೇಶ ಉಲ್ಲಂಘನೆ ಮಾಡಿದರೆ ಅಂತಹ ಸಿಬ್ಬಂದಿ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಅಲ್ಲದೆ ಈ ಕುರಿತಂತೆ ಹೊರಡಿಸಿರುವ ಆದೇಶ ಪ್ರತಿಯನ್ನು ಕೂಡ ಎಲ್ಲ ಪೊಲೀಸ್ ಠಾಣೆಗಳ ನೋಟಿಸ್ ಬೋರ್ಡಿನಲ್ಲಿ ಅಂಟಿಸುವಂತೆ ಸೂಚನೆ ನೀಡಿದ್ದಾರೆ. ಸದ್ಯ ಇದು ತುಮಕೂರು ಜಿಲ್ಲೆಯ ಪೊಲೀಸ್ ವಲಯದಲ್ಲಿ ಸಂಚಲನ ಮೂಡಿಸಿದೆ. ಅಲ್ಲದೆ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಗಮನಕ್ಕೆ ಬಂದ್ರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಈ ಬಗ್ಗೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿ ಕೃಷ್ಣ ಪ್ರತಿಕ್ರಿಯೆ ನೀಡಿದ್ದು, ಹಬ್ಬದ ದಿನಗಳಲ್ಲಿ ಇಂತಹ ಯಾವುದೇ ಘಟನೆಗಳು ನಡೆಯದಿಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದಿದ್ದಾರೆ.