ತುಮಕೂರು: ಸಾಲ ಹಾಗೂ ಬಡ್ಡಿಯ ಪಾವತಿಗಾಗಿ ಫೈನಾನ್ಸ್ ಹಾಗೂ ಇತರೆ ಸಂಸ್ಥೆಗಳು ತೀವ್ರ ಕಿರುಕುಳ ನೀಡುತ್ತಿವೆ. ಈ ಸಾಲ ಹಾಗೂ ಬಡ್ಡಿಯ ಮರುಪಾವತಿಗಾಗಿ ಹೆಚ್ಚಿನ ಕಾಲಾವಕಾಶ ನೀಡಬೇಕೆಂದು ಒತ್ತಾಯಿಸಿ ನಗರದ ಟೌನ್ಹಾಲ್ ಬಳಿ ಸಮಸ್ತ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಸದಸ್ಯರು ಮೌನ ಪ್ರತಿಭಟನೆ ನಡೆಸಿದರು.
ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 7-8 ಸಾವಿರ ಆಟೋ ಚಾಲಕರಿದ್ದು, ಆಟೋ ಓಡಿಸುವುದರ ಮೂಲಕ ಅವರ ಕುಟುಂಬಸ್ಥರ ಜೀವನ ಸಾಗಬೇಕು. ಆದರೆ ಕೊರೊನಾ ಆರಂಭವಾದಾಗಿನಿಂದಲೂ ಆಟೋ ಓಡುವುದು ನಿಂತಿದೆ ಎಂದು ಪ್ರತಿಭಟನಾಕಾರರು ಸಮಸ್ಯೆಗಳನ್ನು ಬಿಚ್ಚಿಟ್ಟರು.
ಈ ನಡುವೆ ಫೈನಾನ್ಸ್ ಕಂಪನಿಯವರು, ಸ್ವಸಹಾಯ ಸಂಘದವರು ಸಾಲ ಮರುಪಾವತಿ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಹಾಗಾಗಿ ಸಾಲ ತೀರಿಸಲು ನಮಗೆ ಗಡುವು ನೀಡಲು ಜಿಲ್ಲಾಧಿಕಾರಿಗಳು ಕ್ರಮವಹಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಆಟೋ ಚಾಲಕ ಅಜ್ಗರ್, ಬ್ಯಾಂಕ್ ಹಾಗೂ ಫೈನಾನ್ಸ್ ಕಂಪನಿಯವರು ಸಾಲ ಹಾಗೂ ಬಡ್ಡಿಯನ್ನು ಒಂದೇ ಬಾರಿಗೆ ಕಟ್ಟುವಂತೆ ಒತ್ತಡ ಹಾಕುತ್ತಿದ್ದಾರೆ. ಜೊತೆಗೆ ವಾಹನವನ್ನು ಜಪ್ತಿ ಮಾಡುವ ಬೆದರಿಕೆ ಹಾಕುತ್ತಿದ್ದಾರೆ. ಪ್ರಸ್ತುತ ಬೆಳಗ್ಗೆಯಿಂದ ಸಂಜೆವರೆಗೂ ಆಟೋ ಓಡಿಸಿದರೂ 200 ರೂ. ದೊರೆಯುವುದಿಲ್ಲ. ಈಗಾಗಲೇ ನಮ್ಮ ಜೀವನ ರಸ್ತೆಗೆ ಬಂದಿದ್ದು, ವಿಷ ಕುಡಿಯುವಂಥ ಪರಿಸ್ಥಿತಿಯುಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.