ತುಮಕೂರು: ಒಬ್ಬಳನ್ನೇ ಪ್ರೀತಿಸುತ್ತಿದ್ದ ಇಬ್ಬರು ಯುವಕರ ನಡುವೆ ಗಲಾಟೆಯಾಗಿ ಓರ್ವ ಕೊಲೆಯಾಗಿರುವ ಘಟನೆ ಜಿಲ್ಲೆಯಲ್ಲಿ ಡಿಸೆಂಬರ್ 11ರಂದು ನಡೆದಿತ್ತು. ರವಿ (23) ಕೊಲೆಯಾದವನು. ಈ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ವರ್ಷದ ಡಿಸೆಂಬರ್ 11ರಂದು ಮಧುಗಿರಿಯ ಕರಡಿಪುರ ಗ್ರಾಮದ ರವಿ ಮೃತದೇಹ ಪತ್ತೆಯಾಗಿತ್ತು. ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ರವಿಯ ಪೋಷಕರು ಮಧುಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಮಧುಗಿರಿ ಪೊಲೀಸರು ತನಿಖೆ ಆರಂಭಿಸಿದ್ದರು. ಕೊಲೆ ಮಾಡಿ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆಂಬ ರೀತಿಯಲ್ಲಿ ಬಿಂಬಿಸಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಭರತ್, ಪವನ್, ತಿಪ್ಪೇಶ್, ಅನಿಲ್, ರೌಡಿಶೀಟರ್ ವೆಂಕಟೇಶ್ ಬಂಧಿತ ಆರೋಪಿಗಳು.
ಮೃತಪಟ್ಟಿರುವ ರವಿ ಮತ್ತು ಆರೋಪಿ ಭರತ್ ಮಧುಗಿರಿಯ ಕರಡಿಪುರದ ಎಸ್ ಎಂ ಕೃಷ್ಣ ಬಡಾವಣೆಯ ನಿವಾಸಿಗಳು. ಆಟೋ ಓಡಿಸಿಕೊಂಡಿದ್ದ ರವಿ ಹಾಗೂ ಭರತ್ ಇಬ್ಬರು ಸ್ನೇಹಿತರಾಗಿದ್ದರು. ಇವರಿಬ್ಬರೂ ಒಬ್ಬಳನ್ನೇ ಪ್ರೀತಿಸುತ್ತಿದ್ದರು. ಆಕೆ ಆಪ್ರಾಪ್ತೆಯಾಗಿದ್ದರೂ ರವಿ ಆಕೆಯನ್ನು ಕರೆದುಕೊಂಡು ಹೋಗಿ ಮದುವೆಯಾಗಿದ್ದ. ಆಕೆ ಅಪ್ರಾಪ್ತೆಯಾದ ಕಾರಣ ಪೋಕ್ಸೋ ಕಾಯ್ದೆಯಡಿ ಜೈಲು ಸೇರಿ ಬಿಡುಗಡೆ ಕೂಡ ಆಗಿದ್ದ. ಜೈಲಿನಿಂದ ಬಿಡಗಡೆಯಾದ ಬಳಿಕ ರವಿ ತನ್ನ ಸ್ನೇಹಿತರೊಡನೆ ಗಲಾಟೆ ಮಾಡಿಕೊಂಡಿದ್ದನು.
ಇದನ್ನೂ ಓದಿ: ತ್ರಿಕೋನ ಪ್ರೇಮ ಪ್ರಕರಣ ದುರಂತ ಅಂತ್ಯ.. ಅತಿಯಾದ ವಾಂಛೆಗೆ ಬಿದ್ದು ಪ್ರಾಣ ಕಳ್ಕೊಂಡ ಯುವಕ..
ಆರೋಪಿ ಭರತ್ ರೌಡಿ ಶೀಟರ್ ವೆಂಕಟೇಶ್ ಜೊತೆ ಸೇರಿ ಆಟೋವೊಂದರಲ್ಲಿ ರವಿಯನ್ನು ಮಧುಗಿರಿಯ ರಿಂಗ್ ರಸ್ತೆಯ ಬಳಿ ಕರೆದೊಯ್ದು ಥಳಿಸಿ ಕೊಲೆ ಮಾಡಿದ್ದನು. ನಂತರ ಅಪಘಾತವಾಗಿದೆ ಎಂದು ಬಿಂಬಿಸಲು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸೋ ನಾಟಕವಾಗಿದ್ದನು.
ಮೃತ ರವಿ ಪೋಷಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಮಧುಗಿರಿ ಪೊಲೀಸರು ಕೆಲ ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ. ಐವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಇನ್ನುಳಿದ ನಾಲ್ವರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ